ADVERTISEMENT

‘ಅಂಗವಿಕಲರಿಗೆ ಮಾಸಾಶನ ನೀಡದಿದ್ದರೆ ಕ್ರಮ’

ತಾಲ್ಲೂಕು ಮಟ್ಟದ ಅಂಗವಿಕಲರ ಕುಂದು– ಕೊರತೆ ಸಭೆಯಲ್ಲಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 5:21 IST
Last Updated 25 ಜನವರಿ 2023, 5:21 IST
ಶ್ರೀರಂಗಪಟ್ಟಣದ ರಂಗನಾಥನಗರದಲ್ಲಿ ಮಂಗಳವಾರ ನಡೆದ ಅಂಗವಿಕಲರ ಕುಂದು– ಕೊರತೆ ಸಭೆಯಲ್ಲಿ ತಹಶೀಲ್ದಾರ್‌ ಶ್ವೇತಾ ಎನ್‌.ರವೀಂದ್ರ ಅಂಗವಿಕಲರ ಅಹವಾಲು ಆಲಿಸಿದರು. ಡಾ.ಮಾರುತಿ ಇದ್ದರು
ಶ್ರೀರಂಗಪಟ್ಟಣದ ರಂಗನಾಥನಗರದಲ್ಲಿ ಮಂಗಳವಾರ ನಡೆದ ಅಂಗವಿಕಲರ ಕುಂದು– ಕೊರತೆ ಸಭೆಯಲ್ಲಿ ತಹಶೀಲ್ದಾರ್‌ ಶ್ವೇತಾ ಎನ್‌.ರವೀಂದ್ರ ಅಂಗವಿಕಲರ ಅಹವಾಲು ಆಲಿಸಿದರು. ಡಾ.ಮಾರುತಿ ಇದ್ದರು   

ಶ್ರೀರಂಗಪಟ್ಟಣ: ದೈಹಿಕ ಅಂಗವಿಕಲರು ಮತ್ತು ಮನೋ ವೈಕಲ್ಯ ಇರುವವರಿಗೆ ಸಕಾಲಕ್ಕೆ ಮಾಸಾಶನ ನೀಡದಿದ್ದರೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್‌ ಶ್ವೇತಾ ಎನ್‌.ರವೀಂದ್ರ ಎಚ್ಚರಿಸಿದರು.

ಪಟ್ಟಣದ ರಂಗನಾಥನಗರದ ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ನಡೆದ ತಾಲ್ಲೂಕು ಮಟ್ಟದ ಅಂಗವಿಕಲರ ಕುಂದು– ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಂಗವಿಕಲರಿಗೆ ಮಾಸಾಶನ ಸ್ಥಗಿತಗೊಂಡಿದ್ದರೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಅದಕ್ಕೆ ಕಾರಣ ಹುಡುಕಿ ಮಾಸಾಶನ ಕೊಡಿಸಬೇಕು. ಮನೆ ಮತ್ತು ಜಮೀನುಗಳ ಖಾತೆ, ಪೌತಿ ಖಾತೆ ಸಮಸ್ಯೆ ಇದ್ದರೆ ಕಂದಾಯ ಇಲಾಖೆ ಸಿಬ್ಬಂದಿ ಸರಿಪಡಿಸಬೇಕು. ಯುಡಿಐಡಿ ಚೀಟಿ ಪಡೆಯಲು ತೊಂದರೆ ಆಗದಂತೆ ವೈದ್ಯರು ನೋಡಿಕೊಳ್ಳಬೇಕು. ಬೆರಳು ಗುರುತಿನ ಕಾರಣಕ್ಕೆ ಆಧಾರ್‌ ಚೀಟಿ ಮತ್ತು ಪಡಿತರ ಚೀಟಿ ಪಡೆಯಲು ಸಾಧ್ಯವಾಗಿಲ್ಲ ಎಂಬ ದೂರುಗಳಿದ್ದು, ಸರಿಪಡಿಸಬೇಕು ಎಂದು ಸೂಚಿಸಿದರು.

ADVERTISEMENT

ಮತದಾರರ ಗುರುತಿನ ಚೀಟಿ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಪಡೆಯಲು ಸಮಸ್ಯೆ ಇರುವುದನ್ನು ಗಮನಕ್ಕೆ ತಂದರೆ ಸಕಾಲದಲ್ಲಿ ಕೊಡಿಸಲಾಗುವುದು. ಸ್ಥಳೀಯ ಸಂಸ್ಥೆಗಳು ಅಂಗವಿಕಲರಿಗೆ ಮೀಸಲಾದ ಶೇ 5 ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಬಾರದು ಎಂದರು.

ಶೇ 75ಕ್ಕಿಂತ ಹೆಚ್ಚು ಮನೋ ವೈಕಲ್ಯ ಇರುವವರಿಗೆ ಸರ್ಕಾರ ₹ 2 ಸಾವಿರ ಮಾಸಾಶನ ನೀಡುತ್ತಿದ್ದು, ಸರಿಯಾಗಿ ತಲುಪುತ್ತಿಲ್ಲ ಎಂದು ಪೋಷಕರು ದೂರು ಹೇಳಿಕೊಂಡರು. ಸಮಸ್ಯೆ ಬಗೆಹರಿಸುವಂತೆ ಸಂಬಂಧಿಸಿದವರಿಗೆ ಸೂಚಿಸಲಾಗುವುದು ಎಂದು ತಹಶೀಲ್ದಾರ್‌ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಅಶೋಕ್‌, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಪಿ.ಮಾರುತಿ, ಹೆಚ್ಚುವರಿ ತಹಶೀಲ್ದಾರ್‌ ರೇಖಾ, ಅಂಗವಿಕಲರ ಪುನರ್ವಸತಿ ಕಾರ್ಯಕರ್ತ ಜೆ.ಎಸ್‌.ಕೃಷ್ಣ, ಅಂಗವಿಕಲರ ಕಲ್ಯಾಣ ಇಲಾಖೆ ಯೋಜನಾ ಸಹಾಯಕ ಪ್ರಭಾಕರ್‌, ಸಮಾಜದ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ್‌, ಐಇಆರ್‌ಟಿ ಸಂಪನ್ಮೂಲ ವ್ಯಕ್ತಿ ರಮೇಶ್‌, ಬಿಸಿಎಂ ಇಲಾಖೆಯ ಪುಷ್ಪಾ, ಪಂಚಾಯತ್‌ ರಾಜ್‌ ಇಲಾಖೆ ಸಹಾಯಕ ನಿರ್ದೇಶಕ ಮೃತ್ಯುಂಜಯ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.