ADVERTISEMENT

ಎಚ್‌.ಡಿ.ಚೌಡಯ್ಯ ನಡೆಗೆ ಎಲ್ಲೆಡೆ ಮೆಚ್ಚುಗೆ!

ಕೆ.ವಿ.ಶಂಕರಗೌಡ ಕುಟುಂಬದ ಕುಡಿಗೆ ಸ್ಥಾನ ಕಲ್ಪಿಸಿದ ಹಿರಿಯ ಜೀವ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 15:25 IST
Last Updated 31 ಮಾರ್ಚ್ 2020, 15:25 IST
ಡಾ.ಎಚ್‌.ಡಿ.ಚೌಡಯ್ಯ
ಡಾ.ಎಚ್‌.ಡಿ.ಚೌಡಯ್ಯ   

ಮಂಡ್ಯ: ಮೂರು ದಶಕಗಳ ಕಾಲ ಜನತಾ ಶಿಕ್ಷಣ ಸಂಸ್ಥೆ (ಪಿಇಎಸ್‌)ಯನ್ನು ಪೋಷಿಸಿ, ಪೊರೆದು ಶೈಕ್ಷಣಿಕ ಲೋಕದಲ್ಲಿ ಹೆಮ್ಮರವಾಗಿ ಬೆಳೆಸಿದ ಡಾ.ಎಚ್‌.ಡಿ.ಚೌಡಯ್ಯ ಅವರು ಮಂಗಳವಾರ ಮಾಡಿದ ಘೋಷಣೆಯನ್ನು ಜಿಲ್ಲೆಯ ಜನರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.

ನಿತ್ಯ ಸಚಿವ ಕೆ.ವಿ.ಶಂಕರಗೌಡರ ಮೊಮ್ಮಗ ಕೆ.ಎಸ್‌.ವಿಜಯಾನಂದ ಅವರನ್ನು ಪಿಇಎಸ್‌ ಸಂಸ್ಥೆ ಅಧ್ಯಕ್ಷರಾಗಿ ಆಯ್ಕೆ ಮಾಡಿ ಮಂಗಳವಾರ ಘೋಷಣೆ ಮಾಡಿದರು. ಹಿರಿಯ ಜೀವ ಎಚ್‌.ಡಿ.ಚೌಡಯ್ಯ ಅವರ ಈ ಘೋಷಣೆ ಮಂಡ್ಯ ಜಿಲ್ಲೆಯ ಜನರಿಗೆ ಅತ್ಯಂತ ಸಂತಸ ಸೃಷ್ಟಿಸಿತು.

ಪಿಇಎಸ್‌ ಸಂಸ್ಥಾಪಕ ಹಾಗೂ ಗುರು ಶಂಕರಗೌಡರು ಕೊಟ್ಟ ಕುರ್ಚಿಯಲ್ಲಿ ಅವರ ಕುಟುಂಬದ ಕುಡಿಯನ್ನೇ ತಂದು ಕೂರಿಸಿದ್ದು ಭಾವಪೂರ್ಣ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಚೌಡಯ್ಯ ಗುರುವಿನ ಋಣ ತೀರಿಸುವ ಕೆಲಸ ಮಾಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ADVERTISEMENT

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರೂ ಆಗಿರುವ ಕೆ.ಎಸ್‌.ವಿಜಯಾನಂದ ಅವರು ಜಿಲ್ಲೆಯಲ್ಲಿ ಸ್ವಾಭಿಮಾನದ ಬದುಕಿಗೆ ಸಾಕ್ಷಿಯಾಗಿದ್ದರು. ತಾತ ಕೆ.ವಿ.ಶಂಕರಗೌಡರು ಸಾಂಸ್ಕೃತಿಕ, ರಾಜಕೀಯ ಕ್ಷೇತ್ರದಲ್ಲಿ ಅಜಾತಶತ್ರುವಾಗಿದ್ದರೂ ಅವರ ನೆರಳಿನಿಂದ ದೂರವೇ ಉಳಿದಿದ್ದರು.

ಶಂಕರಗೌಡರು ಕುವೆಂಪು ಅವರಿಂದ ‘ನಿತ್ಯ ಸಚಿವ’ ಎಂಬ ಗೌರವಕ್ಕೆ ಪಾತ್ರವಾಗಿದ್ದರು. ವಿಜಯಾನಂದ ತಾತನ ಹೆಸರಿಗೆ ಎಂದೂ ಅಂಟಿಕೊಂಡಿದ್ದವರಲ್ಲ. ಸರಳ ಹಾದಿಯಲ್ಲಿ ಹೆಜ್ಜೆ ಇಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಪಿಇಎಸ್‌ ಸಂಸ್ಥೆಯ ಅಧ್ಯಕ್ಷ ಸ್ಥಾನ ಅನಿರೀಕ್ಷಿತವಾಗಿ ಒದಗಿ ಬಂದಿದೆ.

ಜೆಡಿಎಸ್‌ನ ಯುವಮುಖಂಡರೂ ಆಗಿರುವ ವಿಜಯಾನಂದಗೆ ವರಿಷ್ಠರಾದ ಎಚ್‌.ಡಿ.ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ ಒಂದಲ್ಲಾ ಒಂದು ದಿನ ರಾಜಕೀಯ ಸ್ಥಾನ ಕೊಡುತ್ತಾರೆ, ಆ ಮೂಲಕ ಶಂಕರಗೌಡರ ಕುಟುಂಬಕ್ಕೆ ಪುನಶ್ಚೇತನ ಕಲ್ಪಿಸುತ್ತಾರೆ ಎಂಬ ನಿರೀಕ್ಷೆ ಮೊದಲಿಂದಲೂ ಇತ್ತು. ಆದರೆ ಎಚ್‌.ಡಿ.ದೇವೇಗೌಡರು ರಾಜಕೀಯ ಸ್ಥಾನ ಕೊಡುವುದಕ್ಕೂ ಮೊದಲೇ ಎಚ್‌.ಡಿ.ಚೌಡಯ್ಯ ಪಿಇಎಸ್‌ ಅಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಜನರು ಸಂತಸ ವ್ಯಕ್ತಪಡಿಸಿದ್ದಾರೆ.

‘ತಾತ ಕೆ.ವಿ.ಶಂಕರಗೌಡ, ತಂದೆ ಕೆ.ಎಸ್‌.ಸಚ್ಚಿದಾನಂದ, ತಂದೆ ಸಮಾನರಾದ ಎಚ್‌.ಡಿ.ಚೌಡಯ್ಯ ಅವರ ಮಾರ್ಗದಲ್ಲೇ ಮುನ್ನಡೆಯುತ್ತೇನೆ. ಹಿರಿಯರ ಮಾರ್ಗದರ್ಶನಲ್ಲಿ ಸಂಸ್ಥೆ ಕಟ್ಟುವ ಕೆಲಸ ಮಾಡುತ್ತೇನೆ’ ಎಂದು ವಿಜಯಾನಂದ ಪ್ರತಿಕ್ರಿಯಿಸಿದರು.

ಪದಾಧಿಕಾರಿಗಳು: ಅಧ್ಯಕ್ಷರು; ಕೆ.ಎಸ್‌.ವಿಜಯಾನಂದ್‌, ಉಪಾಧ್ಯಕ್ಷರು; ಬಸವಯ್ಯ, ಎಂ.ಬಿ.ಶ್ರೀಧರ, ಕಾರ್ಯದರ್ಶಿ; ಎಸ್‌.ಎಲ್‌.ಶಿವಪ್ರಸಾದ್‌, ಜಂಟಿ ಕಾರ್ಯದರ್ಶಿ– ಕೆ.ಆರ್‌.ದಯಾನಂದ, ಖಜಾಂಚಿ; ಎಚ್‌.ಪಿ.ರವಿಶಂಕರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.