ಶ್ರೀರಂಗಪಟ್ಟಣ: ‘ನಾನು ಸಂಸದನಾಗಿದ್ದಾಗಿ ಶ್ರೀರಂಗಪಟ್ಟಣದಲ್ಲಿ ಐಐಟಿ ತೆರೆಯಬೇಕು ಎಂದು ಎಚ್.ಡಿ. ದೇವೇಗೌಡ ಅವರಿಗೆ ಅರ್ಜಿ ಕೊಟ್ಟಿದ್ದೆ. ಅವರು ಹಾಸನಕ್ಕೆ ಐಐಟಿ ಬೇಕು ಎಂದು ನನ್ನ ಅರ್ಜಿಯನ್ನು ತಿರಸ್ಕರಿಸಿ ಅನ್ಯಾಯ ಮಾಡಿದರು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಟೀಕಿಸಿದರು.
ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ದೇವೇಗೌಡ ಅವರಿಂದಾಗಿ ಜಿಲ್ಲೆಗೆ ಐಐಟಿ ಬರುವ ಅವಕಾಶ ತಪ್ಪಿತು. ಈಗ ಅದು ರಾಯಚೂರಿಗೆ ಹೋಗಿದೆ. ಮಂಡ್ಯದಲ್ಲಿ ಕೃಷಿ ವಿವಿ ಆರಂಭಿಸಲು ಎಚ್.ಡಿ. ಕುಮಾರಸ್ವಾಮಿ ಮತ್ತು ಅವರ ಅಣ್ಣ ಎಚ್.ಡಿ. ರೇವಣ್ಣ ವಿರೋಧಿಸಿದರು. ಇಷ್ಟೆಲ್ಲಾ ಆದರೂ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದ ಮತದಾರರು 2.80 ಲಕ್ಷ ಮತಗಳ ಅಂತರದಲ್ಲಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದರು. ಅಭಿವೃದ್ಧಿ ವಿರೋಧಿಗಳನ್ನು ಗೆಲ್ಲಿಸಿ, ಜಿಲ್ಲೆಯ ಪ್ರಗತಿಗೆ ಹಗಲಿರುಳು ದುಡಿಯುತ್ತಿರುವ ಇದೇ ಜಿಲ್ಲೆಯವರಾದ ನಮ್ಮನ್ನು ಸೋಲಿಸಿದರೆ ಕಣ್ಣಲ್ಲಿ ರಕ್ತ ಬರುವುದಿಲ್ಲವೆ’ ಎಂದು ಪ್ರಶ್ನಿಸಿದರು.
ಕಾವೇರಿ ಆರತಿ: ‘ಗಂಗಾ ಆರತಿ ಮಾದರಿಯಲ್ಲಿ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಆರಂಭಿಸಲು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ₹ 80 ಕೋಟಿ ಮೀಸಲಿಟ್ಟಿದೆ. ಮಂಡ್ಯದ ಮೆಡಿಕಲ್ ಕಾಲೇಜು, ಮೈಷುಗರ್ ಕಾರ್ಖಾನೆ ಪುನರಾರಂಭ, ತಾಲ್ಲೂಕು ಕೇಂದ್ರಗಳಲ್ಲಿ ಬಸ್ ಡಿಪೋ ಆರಂಭಿಸಿದ್ದು ನಾನು. ಶ್ರೀರಂಗಪಟ್ಟಣ ಕ್ಷೇತ್ರದ ನಾಲೆಗಳ ಆಧುನೀಕರಣಕ್ಕೆ ರಮೇಶ ಬಂಡಿಸಿದ್ದೇಗೌಡ ₹ 300 ಕೋಟಿ ಅನುದಾನ ತಂದಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಜಿಲ್ಲೆಗೆ ವಾರ್ಷಿಕ ₹ 1,700 ಕೋಟಿ ಸಿಗುತ್ತಿದೆ. ಈ ಸಾಧನೆಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ಮುಟ್ಟಿಸಬೇಕು. ಜಿ.ಪಂ, ತಾ.ಪಂ. ಚುನಾವಣೆಯಲ್ಲಿ ಶೇ 90ರಷ್ಟು ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.
ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ‘ಶ್ರೀರಂಗಪಟ್ಟಣವನ್ನು ಮಾದರಿ ಕ್ಷೇತ್ರ ಮಾಡಲು ಪಣ ತೊಟ್ಟಿದ್ದೇನೆ. ಸೆಸ್ಕ್ ಅಧ್ಯಕ್ಷನಾದ ಬಳಿಕ ಮಹದೇವುಪುರ ಮತ್ತು ದರಸಗುಪ್ಪೆ ಗ್ರಾಮಗಳಲ್ಲಿ ಸೆಕ್ಸನ್ ಕಚೇರಿ, ಮಳವಳ್ಳಿಯಲ್ಲಿ ಎಕ್ಸಿಕ್ಯೂಟಿವ್ ಕಚೇರಿ ಆರಂಭಕ್ಕೆ ಚಾಲನೆ ನೀಡಲಾಗಿದೆ. ನಾಲೆ ಮತ್ತು ರಸ್ತೆಗಳು ಅಭಿವೃದ್ಧಿಯಾಗುತ್ತಿವೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಯಶಸ್ಸು ಗಳಿಸಬೇಕಾದರೆ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್, ಮನ್‌ಮುಲ್ ಅಧ್ಯಕ್ಷ ಬಿ. ಬೋರೇಗೌಡ, ಜಿ.ಪಂ. ಮಾಜಿ ಅಧ್ಯಕ್ಷ ಎಸ್. ಲಿಂಗಣ್ಣ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಎಸ್. ಚಂದ್ರಶೇಖರ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ. ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎನ್. ಪ್ರಕಾಶ್, ಮಿತ್ರ ರಮೇಶ್, ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ರಜಿನಿ, ಸಂಜಯ್, ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ, ಅಂಜನಾ ಶ್ರೀಕಾಂತ್, ಪಲ್ಲವಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.