
ಮಂಡ್ಯ: ‘ಸಾಲ ಮರುಪಾವತಿ ಮಾಡುವಂತೆ ರೈತರಿಗೆ ಬ್ಯಾಂಕುಗಳು ಒತ್ತಡ ಹೇರಿ, ಕಿರುಕುಳ ನೀಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಬ್ಯಾಂಕ್‌ಗಳು ಜನಸ್ನೇಹಿ ಮತ್ತು ರೈತಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ಕಿರುಕುಳ ನೀಡುವುದು ಕಂಡುಬಂದರೆ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಕೇಂದ್ರ ಸಚಿವ ಮತ್ತು ಮಂಡ್ಯ ಸಂಸದ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್ ಬಗ್ಗೆ ರೈತರಿಂದ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಸಾಲ ಮರುಪಾವತಿ ಮಾಡುವ ಬಗ್ಗೆ ರೈತರಿಗೆ ಮೊದಲು ಜಾಗೃತಿ ಮೂಡಿಸಬೇಕು. ನೇರವಾಗಿ ಮನೆ, ವಾಹನಗಳನ್ನು ಜಪ್ತಿ ಮಾಡುವಂತಿಲ್ಲ. ಈ ಬಗ್ಗೆ ಲೀಡ್ ಬ್ಯಾಂಕ್ ಮ್ಯಾನೇಜರ್ ಬ್ಯಾಂಕುಗಳ ವ್ಯವಸ್ಥಾಪಕರಿಗೆ ಸೂಚನೆ ನೀಡಬೇಕು ಎಂದು ಸಲಹೆ ನೀಡಿದರು.
ಕೈಗಾರಿಕೆ ಸ್ಥಾಪನೆಗೆ ಕ್ರಮ
ಜಿಲ್ಲೆಯ ಜನರ ಅಭಿವೃದ್ಧಿಗಾಗಿ ನಾಗಮಂಗಲ ಅಥವಾ ಮಳವಳ್ಳಿ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಸೂಕ್ತ ಸರ್ಕಾರಿ ಜಾಗವನ್ನು ಗುರುತಿಸಿ ಭೂ ಸ್ವಾಧೀನ ಪಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
‘ನಾಗಮಂಗಲ ತಾಲ್ಲೂಕಿನ ಹಟ್ನಾ ಬಳಿ 1,277 ಎಕರೆ, ಮದ್ದೂರು ತಾಲ್ಲೂಕಿನ ಕುದರಗುಂಡಿ ಬಳಿ 107 ಎಕರೆ, ಮಳವಳ್ಳಿ ತಾಲ್ಲೂಕಿನ ಪಂಡಿತನಹಳ್ಳಿ ಬಳಿ 1,249 ಎಕರೆ ಹಾಗೂ ಮಂಡ್ಯ ತಾಲ್ಲೂಕಿನ ನೊದೆಕೊಪ್ಪಲು ಸಮೀಪ 284 ಎಕರೆ ಜಾಗ ಗುರುತಿಸಿ, ನೋಟಿಫಿಕೇಶನ್ ಮಾಡಲಾಗಿತ್ತು. ರೈತರ ವಿರೋಧದಿಂದ ಪ್ರಕ್ರಿಯೆ ಸ್ಥಗಿತವಾಗಿದೆ’ ಎಂದು ಜಿಲ್ಲಾಧಿಕಾರಿ ಕುಮಾರ ಮಾಹಿತಿ ನೀಡಿದರು.
ಹೆದ್ದಾರಿಯಲ್ಲಿ ಅಪಘಾತ
ಹನಕೆರೆ, ಗೌಡಹಳ್ಳಿ ಹೆದ್ದಾರಿಯಲ್ಲಿ ಜನರು ಅಪಘಾತಕ್ಕೆ ತುತ್ತಾಗುತ್ತಿದ್ದಾರೆ, ಹನಕೆರೆ ಗೌಡಹಳ್ಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಅನುಮತಿ ದೊರೆತಿದೆ. ಸಂಬಂಧ ಪಟ್ಟ ಅಧಿಕಾರಿಗಳು ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸಬೇಕು. ಮುತ್ತತ್ತಿ– ಹಲಗೂರು ಬಳಿಯೂ ಅಪಘಾತ ಹೆಚ್ಚಿವೆ. ಸಮಸ್ಯೆ ಅಧಿಕಾರಿಗಳು ಮುತುವರ್ಜಿ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ 77 ನೋಂದಾಯಿತ ಕ್ರಷರ್ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಅಕ್ರಮವಾಗಿ ಗಣಿಗಾರಿಕೆ ಅಥವಾ ಕ್ರಷಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮ ಜಾರಿಗೊಳಿಸಿ. ಪಡಿತರ ಚೀಟಿ ಪರಿಷ್ಕರಣೆ ಮಾಡಿಸುತ್ತಿರುವ ಹಿನ್ನೆಲೆಯಲ್ಲಿ ಅನರ್ಹ ಬಿ.ಪಿ.ಎಲ್ ಕಾರ್ಡ್‌ದಾರರನ್ನು ತೆಗೆದು ಹಾಕಿ. ಯಾವುದೇ ಕಾರಣಕ್ಕೂ ಅರ್ಹ ಬಿ.ಪಿ.ಎಲ್ ಕಾರ್ಡ್ ಹೊಂದಿರುವವರನ್ನು ಕೈಬಿಡುವಂತಿಲ್ಲ ಎಂದು ತಾಕೀತು ಮಾಡಿದರು.
ಸಭೆಯಲ್ಲಿ ಕೆ.ಆರ್. ಪೇಟೆ ಶಾಸಕ ಎಚ್.ಟಿ.ಮಂಜು, ಪರಿಷತ್ ಸದಸ್ಯ ವಿವೇಕಾನಂದ, ಮಾಜಿ ಶಾಸಕ ಕೆ. ಅನ್ನದಾನಿ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಇನ್ನಿತರ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
‘ಕೈಗಾರಿಕೆ ಸ್ಥಾಪನೆಗಾಗಿ ಸಿಎಂಗೆ ಪತ್ರ’
‘ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವುದಕ್ಕೆ ಜಾಗ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಇಬ್ಬರಿಗೂ ಪತ್ರ ಬರೆದಿದ್ದೇನೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಮಂಡ್ಯ ಜಿಲ್ಲೆಯಲ್ಲಿ ದೊಡ್ಡ ಕೈಗಾರಿಕೆ ಸ್ಥಾಪನೆ ಮಾಡಬೇಕು ಎನ್ನುವ ಬೇಡಿಕೆ ಇದೆ. ನಾನು ಸಂಸದನಾಗಿ ಒಂದೂವರೆ ವರ್ಷ ಆಯಿತು. ಕೈಗಾರಿಕೆಗೆ ಜಾಗ ಕೊಡಿ ಎಂದು ಡಿಸಿ ಅವರಿಗೆ ಪತ್ರ ಬರೆದಿದ್ದೇನೆ. ಜಿಲ್ಲಾಧಿಕಾರಿ ಜಾಗ ಹುಡುಕಿದರೂ ಸಿಕ್ಕಿಲ್ಲ ಎಂದರು.
‘ರಾಜ್ಯದಲ್ಲಿ ಕೇಂದ್ರದಿಂದ ಏನೇ ಕೆಲಸ ಆಗಬೇಕಿದ್ದರೂ ರಾಜ್ಯದ ಸಹಕಾರ ಬೇಕಿದೆ. ಸಹಕಾರ ಸಿಗುತ್ತದೆ ಎಂಬ ನಂಬಿಕೆ ಇದೆ. ಮಂಡ್ಯ ಶಾಸಕರು ಜಾಗ ಕೊಡುವುದಾದರೆ ಕೊಡಲಿ. ಸರ್ಕಾರದಿಂದ ಸ್ವಾಧೀನ ಮಾಡಿಸಿ ನಮಗೆ ಕೊಡಲಿ. ಎಲ್ಲರೂ ಸೇರಿ ಕೈಗಾರಿಕೆ ತಂದು ಉದ್ಯೋಗ ಸೃಷ್ಟಿ ಮಾಡೋಣ’ ಎಂದರು.
‘ತಡೆಗೋಡೆಯಿಲ್ಲದೆ ಅಪಘಾತ ಹೆಚ್ಚಳ’
ಮಂಡ್ಯ ಜಿಲ್ಲೆಯಲ್ಲಿ ವಿಶ್ವೇಶ್ವರಯ್ಯ ನಾಲೆಗೆ ತಡೆಗೋಡೆಯಿಲ್ಲದ ಕಾರಣ ವಾಹನ ಬೈಕ್‌ಗಳು ನೀರಿಗೆ ಬಿದ್ದು ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಕಾವೇರಿ ನೀರಾವರಿ ನಿಗಮ ಏಕೆ ತುರ್ತು ಕ್ರಮ ಕೈಗೊಂಡಿಲ್ಲ ಎಂದು ಮಂಡ್ಯ ಶಾಸಕ ಪಿ.ರವಿಕುಮಾರ್ ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಕುಮಾರ ಪ್ರತಿಕ್ರಿಯಿಸಿ ‘ಜಿಲ್ಲೆಯಲ್ಲಿ ವಿಶ್ವೇಶ್ವರಯ್ಯ ನಾಲೆ ವ್ಯಾಪ್ತಿ 535 ಕಿ.ಮೀ. ಇದೆ. ನಾಲೆಯುದ್ದಕ್ಕೂ ತಡೆಗೋಡೆ ನಿರ್ಮಿಸಲು ₹191 ಕೋಟಿ ಬೇಕಾಗುತ್ತದೆ. ಮೊದಲ ಹಂತದಲ್ಲಿ ₹35 ಕೋಟಿಗೆ ಪ್ರಸ್ತಾವ ಸಲ್ಲಿಸಿದ್ದು ₹8 ಕೋಟಿ ಬಿಡುಗಡೆಯಾಗಿದೆ. ತಡೆಗೋಡೆ ಸೂಚನಾ ಫಲಕ ಹಂಪ್ ನಿರ್ಮಾಣಕ್ಕೆ ಕ್ರಮಕೈಗೊಂಡಿದ್ದು 17 ಬ್ಲಾಕ್ ಸ್ಪಾಟ್ ಗುರುತಿಸಲಾಗಿದೆ’ ಎಂದರು.
‘ರಸಗೊಬ್ಬರ ಜಪ್ತಿ: ಎಫ್.ಐ.ಆರ್ ದಾಖಲಿಸಿ’
ಮಂಡ್ಯ ಜಿಲ್ಲಾ ರಸಗೊಬ್ಬರ ಪರಿವೀಕ್ಷಕರು ಹಾಗೂ ಜಾರಿದಳದ ಅಧಿಕಾರಿಗಳು ಮದ್ದೂರಿನ ಸೋಮೇಶ್ವರ ಫರ್ಟಿಲೈಸರ್‌ನಲ್ಲಿದ್ದ 147 ಟನ್ ರಸಗೊಬ್ಬರ ಹಾಗೂ 64750 ಹೊಸ ಖಾಲಿ ಚೀಲಗಳನ್ನು ಜಪ್ತಿ ಮಾಡಿದ್ದಾರೆ. ಆದರೆ ಇದುವರೆಗೂ ಏಕೆ ಎಫ್‌ಐಆರ್ ದಾಖಲಿಸಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಜಂಟಿ ಕೃಷಿ ನಿರ್ದೇಶಕರನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಂಟಿ ಕೃಷಿ ನಿರ್ದೇಶಕ ‘ಸ್ಯಾಂಪಲ್ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು ಅಲ್ಲಿಂದ ವರದಿ ಬಂದ ನಂತರ ಎಫ್‌ಐಆರ್ ಮಾಡಲಾಗುವುದು’ ಎಂದರು.
ಈ ಉತ್ತರದಿಂದ ಅಸಮಾಧಾನಗೊಂಡ ವಿವೇಕಾನಂದ ‘ಅಕ್ರಮ ಎಂದು ಕಂಡುಬಂದ ಕೂಡಲೇ ಎಫ್‌ಐಆರ್ ದಾಖಲಿಸಬೇಕಿತ್ತು. ವಿಳಂಬ ಮಾಡುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ’ ಎಂದರು.
ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ‘ಇಂದು ಸೂರ್ಯ ಮುಳುಗುವುದರೊಳಗೆ ಎಫ್‌ಐಆರ್ ಮಾಡಿಸಿ’ ಎಂದಾಗ ಸಭೆಯಲ್ಲಿದ್ದ ಅಧಿಕಾರಿಗಳು ಜೋರಾಗಿ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.