ADVERTISEMENT

ಮಂಡ್ಯ | ಹೃದಯಾಘಾತ: 3 ತಿಂಗಳಲ್ಲಿ 22 ಸಾವು

ಮಂಡ್ಯ: ‘ಮಿಮ್ಸ್‌’ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞರೇ ಇಲ್ಲ!

ಸಿದ್ದು ಆರ್.ಜಿ.ಹಳ್ಳಿ
Published 4 ಜುಲೈ 2025, 7:11 IST
Last Updated 4 ಜುಲೈ 2025, 7:11 IST
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್‌)
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್‌)   

ಮಂಡ್ಯ: ಇಲ್ಲಿಯ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಮಿಮ್ಸ್‌) ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞರಿಲ್ಲದ ಕಾರಣ ಜಿಲ್ಲೆಯ ಜನರು ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ತೀವ್ರ ಪರದಾಡುವಂತಾಗಿದೆ.

18 ಲಕ್ಷ ಜನಸಂಖ್ಯೆ ಹೊಂದಿರುವ ಮಂಡ್ಯ ಜಿಲ್ಲೆಯ ಯಾವ ಸರ್ಕಾರಿ ಆಸ್ಪತ್ರೆಯಲ್ಲೂ ಹೃದ್ರೋಗ ತಜ್ಞರಿಲ್ಲ. ಹೀಗಾಗಿ ಹೃದ್ರೋಗ ಚಿಕಿತ್ಸೆಗಾಗಿ ಜನರು ಮಂಡ್ಯ ಜಿಲ್ಲಾ ಕೇಂದ್ರದಿಂದ 40 ಕಿ.ಮೀ. ದೂರದ ಮೈಸೂರಿಗೆ ಅಥವಾ 100 ಕಿ.ಮೀ. ದೂರದ ಬೆಂಗಳೂರಿಗೆ ಹೋಗಬೇಕಾಗಿದೆ.

‘ಕಳೆದ 3 ತಿಂಗಳಲ್ಲಿ ಜಿಲ್ಲೆಯಲ್ಲಿ ಹೃದಯಾಘಾತದಿಂದ 22 ಮಂದಿ ‘ಮಿಮ್ಸ್‌‌’ ಮತ್ತು ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ. ಇವರಲ್ಲಿ 16 ಪುರುಷರು ಮತ್ತು 6 ಮಹಿಳೆಯರು. 29 ವರ್ಷದ ಯುವತಿ ಸೇರಿದಂತೆ ಒಟ್ಟು ಐವರು 50 ವರ್ಷದೊಳಗಿನವರು. ಉಳಿದವರು 50 ವರ್ಷ ಮೇಲಿನವರು’ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ADVERTISEMENT

6,068 ಮಂದಿಗೆ ಇಸಿಜಿ:

ಏಪ್ರಿಲ್‌ನಿಂದ ಜೂನ್‌ ತಿಂಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 6,068 ಮಂದಿ ‘ಇಸಿಜಿ’ ಮಾಡಿಸಿಕೊಂಡಿದ್ದಾರೆ. ಇದರಲ್ಲಿ 2,825 ನಾರ್ಮಲ್‌, 2,909 ಅಬ್‌ನಾರ್ಮಲ್‌, 96 ಸ್ಟೆಮಿ (ಎಸ್‌.ಟಿ.ಇ.ಎಂ.ಐ) ಕ್ರಿಟಿಕಲ್‌ ಹಾಗೂ 235 ಮಂದಿ ‘ಕ್ರಿಟಿಕಲ್‌’ ಎಂದು ವರದಿಯಾಗಿದೆ. 

‘ಪುನೀತ್‌ ರಾಜ್‌ಕುಮಾರ್‌ ಹೃದಯ ಜ್ಯೋತಿ ಯೋಜನೆ’ಯಡಿ ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್. ಪೇಟೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಿಗೆ ‘ಇಸಿಜಿ’ ಯಂತ್ರಗಳ ಸೌಲಭ್ಯ ದೊರಕಿದೆ. ಇಲ್ಲಿಯ ಇಸಿಜಿ ವರದಿಯು ಪೋರ್ಟಲ್‌ಗೆ ಅಪ್‌ಲೋಡ್‌ ಆದ ತಕ್ಷಣ ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆಯ ತಜ್ಞವೈದ್ಯರ ಸಲಹೆ ಮೇರೆಗೆ ರೋಗಿಗೆ ಇಂಜೆಕ್ಷನ್‌ ಕೊಟ್ಟು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕಳುಹಿಸುತ್ತೇವೆ’ ಎಂದು ಜಿಲ್ಲಾ ಸರ್ವೇಕ್ಷಾಣಾಧಿಕಾರಿ ಡಾ.ಕುಮಾರ್‌ ಮಾಹಿತಿ ನೀಡಿದರು. 

110 ಮಂದಿಗೆ ಶಿಫಾರಸು: 

‘ಮಂಡ್ಯದ ಮಿಮ್ಸ್‌ ಆಸ್ಪತ್ರೆಯಲ್ಲಿ 3 ತಿಂಗಳಲ್ಲಿ ನೂರಾರು ಮಂದಿಗೆ ಇಸಿಜಿ ಮಾಡಿಸಿ, ಹೃದಯ ಸಂಬಂಧಿ ಕಾಯಿಲೆಯಿಂದ ನರಳುತ್ತಿರುವ 110 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಜಯದೇವ ಆಸ್ಪತ್ರೆಗೆ ಕಳುಹಿಸಲಾಗಿದೆ’ ಎಂದು ‘ಮಿಮ್ಸ್‌’ ಮೆಡಿಕಲ್‌ ಸೂಪರಿಂಟೆಂಡೆಂಟ್ ಡಾ.ಶಿವಕುಮಾರ್‌ ತಿಳಿಸಿದರು. 

‘ಮಿಮ್ಸ್‌ ಮತ್ತು ತಾಲ್ಲೂಕು ಆಸ್ಪತ್ರೆಗಳು ಇಸಿಜಿ ಮಾಡಲು ಮಾತ್ರ ಸೀಮಿತವಾಗಿವೆ. ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರೆಫರ್‌ ಮಾಡುವುದರಿಂದ ಅಲ್ಲಿಯೂ ರೋಗಿಗಳ ದಟ್ಟಣೆಯಾಗಿ ‘ಗೋಲ್ಡನ್‌ ಹವರ್‌’ ಮೀರಿ ಸಾವುಗಳ ಸಂಖ್ಯೆ ಹೆಚ್ಚುತ್ತಿದೆ’ ಎಂದು ಕರುನಾಡ ಸೇವಕರು ಸಂಘಟನೆಯ ಮುಖಂಡ ಎಂ.ಬಿ. ನಾಗಣ್ಣಗೌಡ ಅಸಮಾಧಾನ ವ್ಯಕ್ತಪಡಿಸಿದರು. 

‘ಇಸಿಜಿ’ಗೆ ಸೀಮಿತವಾದ ತಾಲ್ಲೂಕು ಆಸ್ಪತ್ರೆಗಳು  ‘ಮಿಮ್ಸ್‌’ ಆಸ್ಪತ್ರೆಯಲ್ಲಿ ಹೃದ್ರೋಗ ವಿಭಾಗವೇ ಇಲ್ಲ 3 ತಿಂಗಳಲ್ಲಿ 6,068 ಮಂದಿಗೆ ಇಸಿಜಿ

‘ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ’ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಅನುಮತಿ ಸಿಕ್ಕರೆ ಹೃದ್ರೋಗ ತಜ್ಞರು ಸೇರಿದಂತೆ ಎಲ್ಲರೂ ಮಿಮ್ಸ್‌ ಆಸ್ಪತ್ರೆಯಲ್ಲಿ ಲಭ್ಯವಾಗುತ್ತಾರೆ
ಡಾ.ಪಿ. ನರಸಿಂಹಸ್ವಾಮಿ ನಿರ್ದೇಶಕ ಮಿಮ್ಸ್‌ ಮಂಡ್ಯ

ಮಂಡ್ಯ ಜಿಲ್ಲೆ: ಹೃದಯಾಘಾತದಿಂದ ಸಾವಿನ ವಿವರ

ಏಪ್ರಿಲ್‌;4

ಮೇ;6

ಜೂನ್‌;12

ಒಟ್ಟು;22

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.