
ಸಂತೇಬಾಚಹಳ್ಳಿ: ಹೇಮಾವತಿ ಎಡದಂಡೆ ನಾಲೆಗೆ ತಡೆಗೋಡೆ ಇಲ್ಲದೆ, ವಾಹನ ಅಪಘಾತ ಹಾಗೂ ನಾಲೆಯೊಳಗೆ ಜಾನುವಾರು ಬೀಳುವ ಪ್ರಕರಣಗಳು ಹೆಚ್ಚಾಗಿದ್ದು ಸಾರ್ವಜನಿಕರು ಆತಂಕಗೊಂಡಿದ್ದಾರೆ.
‘ಹೇಮಾವತಿ ಎಡದಂಡೆ ಮುಖ್ಯನಾಲೆಯ 300 ಕಿಲೋ ಮೀಟರ್ ಆಧುನೀಕರಣ ಕಾಮಗಾರಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರ ರಕ್ಷಣೆಗಾಗಿ ‘ರಕ್ಷಣಾ ಕಲ್ಲು’ (ಗಾರ್ಡ್ ಸ್ಟೋನ್) ಅಳವಡಿಸದೆ ಕಾಮಗಾರಿ ಮುಗಿಸಿ ಸರ್ಕಾರದ ಹಣವನ್ನು ಲೂಟಿ ಮಾಡಿದ್ದಾರೆ’ ಎಂದು ಸಾಮಾಜಿಕ ಹೋರಾಟಗಾರ ಜಿ.ಆರ್. ಜಯಣ್ಣ ಗಂಭೀರ ಆರೋಪ ಮಾಡಿದ್ದಾರೆ.
ಚನ್ನರಾಯಪಟ್ಟಣ ತಾಲ್ಲೂಕಿನ ಮೂಲಕ ಭಾರತಿಪುರ, ಕುಂದೂರು, ಸಾರಂಗಿ ಮೂಲಕ ಪಾಂಡವಪುರ, ಚಿನಕುರಳಿ ಸೇರಿದಂತೆ ವಿವಿಧ ತಾಲ್ಲೂಕುಗಳ ಮೂಲಕ ಹಾದುಹೋಗುವ ಹೇಮಾವತಿ ಎಡದಂಡೆ ನಾಲೆಯ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟಾರೆ 142 ಕಿ.ಮೀ ದೂರದಲ್ಲಿ 21,358 ರಕ್ಷಣಾ ಕಲ್ಲುಗಳಿಗೆ ಪ್ರತಿ ಕಲ್ಲಿಗೆ ₹2,239ರಂತೆ ₹4.78 ಕೋಟಿ ಹಣ ಪಾವತಿಸಲಾಗಿದೆ.
ಆದರೆ, ಯಾವುದೇ ಗ್ರಾಮೀಣ ಪ್ರದೇಶದಲ್ಲಿಯೂ ಕೂಡ ರಕ್ಷಣಾ ಕಲ್ಲುಗಳನ್ನು ಅಳವಡಿಕೆ ಮಾಡದೆ ಸರ್ಕಾರದಿಂದ ‘ನಕಲಿ ಬಿಲ್’ ಪಡೆದು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮೋಸ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿ ಹಾಗೂ ಲೋಕಾಯುಕ್ತರಿಗೆ ದೂರು ನೀಡಲಾಗಿದೆ.
ತಡೆಗೋಡೆಯಿಲ್ಲದ ಕಾರಣ ನಾಲೆ ಪಕ್ಕದ ರಸ್ತೆಗಳಲ್ಲಿ ಸಾರ್ವಜನಿಕರು ಮತ್ತು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ರಾತ್ರಿ ವೇಳೆ ಸಂಚರಿಸುವ ವೇಳೆ ತಿರುವಿನಿಂದ ಕೂಡಿದ ರಸ್ತೆಗಳಲ್ಲಿ ವಾಹನ ನಿಯಂತ್ರಣ ತಪ್ಪಿ ನಾಲೆಗೆ ಬೀಳುತ್ತಿವೆ. ಹೊಲಗಳಿಗೆ ಟ್ರ್ಯಾಕ್ಟರ್ ಮತ್ತು ಜಾನುವಾರುಗಳೊಂದಿಗೆ ಸಾಗುವ ರೈತರಿಗೂ ಅಪಾಯ ತಪ್ಪಿದ್ದಲ್ಲ.
ಹೇಮಾವತಿ ನಾಲೆಯ ಮೇಲೆ ಹಲವಾರು ಅಪಘಾತಗಳಾಗಿವೆ. 2025ರ ನವೆಂಬರ್ 3ರಂದು ಜಾನುವಾರು ಮೇಯುತ್ತಿರುವ ಸಂದರ್ಭದಲ್ಲಿ ನಾಲೆಗೆ ಬಿದ್ದಿದೆ. ಕೂಡಲೇ ರಕ್ಷಣೆಗೆ ಮುಂದಾದ ಸಂತೇಬಾಚಹಳ್ಳಿ ಹೋಬಳಿಯ ಬಿ. ಗಂಗನಹಳ್ಳಿ ಮೂಲದ ರೈತ ಸುರೇಶ್ ನಾಲೆಯಲ್ಲಿ ಕೊಚ್ಚಿಹೋಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಕೆ.ಆರ್. ಪೇಟೆ ತಾಲ್ಲೂಕಿನಲ್ಲಿಯೂ ಇದೇ ರೀತಿ ಘಟನೆಗಳು ನಡೆಯುತ್ತಿವೆ. ಪಾಂಡವಪುರದಲ್ಲಿ ನಾಲೆಗೆ ಕಾರು ಹಾಗೂ ಬಸ್ ಉರುಳಿತ್ತು. ರಕ್ಷಣಾ ಕಲ್ಲುಗಳಿಗೆ ಹಣ ಪಾವತಿಯಾಗಿದ್ದು ರಕ್ಷಣಾ ಕಲ್ಲುಗಳನ್ನ ಅಳವಡಿಕೆ ಮಾಡಿದ್ದರೆ ಈ ರೀತಿ ಘಟನೆಗಳು ನಡೆಯುತ್ತಿರಲಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ರೈತರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹೇಮಾವತಿ ನಾಲೆಯಲ್ಲಿ ನಮ್ಮ ಸಂಬಂಧಿ ಸುರೇಶ್ ಬಿದ್ದು ಸಾವಿಗೀಡಾಗಿದ್ದಾರೆ. ತಡೆಗೋಡೆ ನಿರ್ಮಾಣ ಮಾಡಿದರೆ ರೈತರಿಗೆ ಹಾಗೂ ಸಾರಿಗೆ ಸಂಪರ್ಕಕ್ಕೆ ಅನುಕೂಲವಾಗುತ್ತದೆ.– ಮಂಜೇಗೌಡ ರೈತ ಬಿ.ಗಂಗನಹಳ್ಳಿ
ನಾನು ಇಲ್ಲಿಗೆ ಕರ್ತವ್ಯಕ್ಕೆ ಬಂದು ನಾಲ್ಕು ತಿಂಗಳಾಗಿದೆ. ಎಸ್ಟಿಮೇಟ್ ಹಾಗೂ ಕಾಮಗಾರಿ ಪರಿಶೀಲನೆ ಮಾಡಿ ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ.– ಜಯರಾಮು, ಕಾರ್ಯಪಾಲಕ ಎಂಜಿನಿಯರ್, ಹೇಮಾವತಿ ನೀರಾವರಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.