ADVERTISEMENT

ಹೈಟೆನ್ಷನ್‌ ತಂತಿ ಅಳವಡಿಕೆ: ಪರಿಹಾರಕ್ಕೆ ಆಗ್ರಹ

ಕೆಪಿಟಿಸಿಎಲ್‌ ಅಧಿಕಾರಿಗಳ ವಿರುದ್ಧ ಜಮೀನು ಮಾಲೀಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 10:06 IST
Last Updated 14 ಡಿಸೆಂಬರ್ 2019, 10:06 IST
ಮದ್ದೂರು ತಾಲ್ಲೂಕಿನ ಗೊರವನಹಳ್ಳಿ ಬಳಿ ಹೈಟೆನ್ಷನ್‌ ತಂತಿ ಅಳವಡಿಕೆಗೆ ಮುಂದಾದ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡರು
ಮದ್ದೂರು ತಾಲ್ಲೂಕಿನ ಗೊರವನಹಳ್ಳಿ ಬಳಿ ಹೈಟೆನ್ಷನ್‌ ತಂತಿ ಅಳವಡಿಕೆಗೆ ಮುಂದಾದ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡರು   

ಮದ್ದೂರು: ಪಟ್ಟಣ ಸಮೀಪದ ಗೊರವನಹಳ್ಳಿ ಬಳಿ ರೈತರ ಜಮೀನಿನಲ್ಲಿ ವಿದ್ಯುತ್ ಹೈಟೆನ್ಷನ್ ತಂತಿ ಅಳವಡಿಸಲು ಮುಂದಾದ ಕೆಪಿಟಿಸಿಎಲ್‌ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಘೇರಾವ್‌ ಹಾಕಿದರು.

ರೈತರಾದ ಅಪ್ಪಾಜಿಗೌಡ, ಮಹದೇವಯ್ಯ, ರಾಜು, ಗೀತಾ ಸೇರಿದಂತೆ ಅನೇಕರ ಜಮೀನಿನಲ್ಲಿ ಕಂಬ ನೆಡಲು ಅಧಿಕಾರಿಗಳು ಬಂದಿದ್ದರು.

ಕಾಮಗಾರಿ ನಡೆಸಲು ರೈತರು ಬಿಡಲಿಲ್ಲ. ಹೈಟೆನ್ಷನ್ ತಂತಿ ಅಳವಡಿಕೆ ಬಗ್ಗೆ ಯಾವುದೇ ಮಾಹಿತಿ ಅಥವಾ ನೋಟಿಸ್ ನೀಡಿಲ್ಲ. ಪ್ರತಿ ಗುಂಟೆಗೆ ಮಾರುಕಟ್ಟೆ ದರ ₹5ಲಕ್ಷದಿಂದ ₹6 ಲಕ್ಷ ಇದೆ. ಕೆಪಿಟಿಸಿಎಲ್‌ನವರು ಗುಂಟೆಗೆ ₹5 ಸಾವಿರದಿಂದ ₹6 ಸಾವಿರ ಪರಿಹಾರ ನೀಡುವುದಾಗಿ ಹೇಳುತ್ತಿದ್ದಾರೆ. ಇದರಿಂದ ರೈತರಿಗೆ ತುಂಬಾ ನಷ್ಟವಾಗುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಉದ್ವಿಗ್ನ ಗೊಂಡಿತ್ತು. ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು.

ಜಮೀನಿಗೆ ಸೂಕ್ತ ರೀತಿಯ ಪರಿಹಾರ ನೀಡಿದರೆ ಮಾತ್ರ ಕಾಮಗಾರಿಗೆ ಅವಕಾಶ ನೀಡ ಲಾಗುವುದು. ಇಲ್ಲದಿದ್ದರೆ ಜೀವ ಹೋದರು ಕಾಮಗಾರಿ ಮಾಡಲು ಅನುಮತಿ ನೀಡುವುದಿಲ್ಲ ಎಂದು ಜಮೀನಿನ ಮಾಲೀಕರು ತಿಳಿಸಿದರು.

ತಹಶೀಲ್ದಾರ್ ನಾಗೇಶ್ ಮಾತನಾಡಿ, ‘ಜಮೀನಿಗೆ ತುಂಬಾ ಕಡಿಮೆ ಪರಿಹಾರ ನೀಡಲಾಗುತ್ತಿದೆ ಎಂದು ರೈತರು ತಿಳಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.