ಶ್ರೀರಂಗಪಟ್ಟಣ: ತಾಲ್ಲೂಕಿನ ತಡಗವಾಡಿ ಗ್ರಾಮದಲ್ಲಿ ಮೊಹರಂ ಕಡೇ ದಿನದ ನಿಮಿತ್ತ ಹಿಂದೂ– ಮುಸ್ಲಿಂ ಭಾವೈಕ್ಯದ ಸಂಕೇತವಾದ ಬಾಬಯ್ಯನ ಹಬ್ಬ ಸಡಗರ, ಸಂಭ್ರಮದಿಂದ ನಡೆಯಿತು.
ಗ್ರಾಮದ ಮಧ್ಯೆ ಇರುವ ಬಾಬಯ್ಯ ಗುಡಿಯಲ್ಲಿ ಶನಿವಾರ ಬಾಬಯ್ಯ, ಕತ್ತಿ ಬಾಬಯ್ಯ ಮತ್ತು ಹುಚ್ಚು ಬಾಬಯ್ಯ ದೇವರನ್ನು ಸಂಕೇತಿಸುವ ಹಸ್ತಗಳಿಗೆ ಪೂಜೆಗಳು ನಡೆದವು. ಕೊಡಿಯಾಲ ಮತ್ತು ಕೊಡಗಹಳ್ಳಿಯಿಂದ ಬಂದಿದ್ದ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಊರಿನ ಪ್ರಮುಖ ಬೀದಿಗಳಲ್ಲಿ ಪಂಜಗಳ ಮೆರವಣಿಗೆ ನಡೆಯಿತು. 50ಕ್ಕೂ ಹೆಚ್ಚು ಹಿಂದೂ ಭಕ್ತರು ಫಕೀರರ ವೇಶ ಧರಿಸಿ, ಮೈಗೆ ಮಸಿ ಬಳಿದುಕೊಂಡು, ಗೋಣಿ ಚೀಲ ಉಟ್ಟುಕೊಂಡು ಮೆರವಣಿಗೆಯಲ್ಲಿ ಸಾಗಿದರು. ತಲೆಗೆ ಬಣ್ಣದ ಬಣ್ಣದ ಟೊಪ್ಪಿಗೆ ಧರಿಸಿ ಕೋಡಂಗಿ ವೇಶದಲ್ಲಿ ಗಮನ ಸೆಳೆದರು.
ಪಕ್ಕದ ಗರಕಗಳ್ಳಿಯ ಗ್ರಾಮದಲ್ಲೂ ಬಾಬಯ್ಯನ ಪಂಜಗಳು ಮತ್ತು ಫಕೀರರ ಮೆರವಣಿಗೆ ನಡೆಯಿತು. ಎರಡೂ ಗ್ರಾಮಗಳ ಮನೆಗಳಲ್ಲಿ ಪಂಜಗಳಿಗೆ ಪೂಜೆ ಸಲ್ಲಿಸಿ ಫಕೀರರಿಗೆ ನೀರು ಸುರಿಯಲಾಯಿತು. ಮೆರವಣಿಗೆಯ ಉದ್ದಕ್ಕೂ ಫಕೀರರು ತಮಟೆಯ ಸದ್ದಿಗೆ ಕುಣಿದು ಕುಪ್ಪಳಿಸಿದರು.
ಮೆರವಣಿಗೆ ಮುಗಿಸಿ ಪಂಜದ ಉತ್ಸವ ಬಾಬಯ್ಯ ಗುಡಿಗೆ ಮರಳಿದ ನಂತರ ಕೊಂಡೋತ್ಸವ ಆರಂಭವಾಯಿತು. ದೇವಾಲಯದ ಮುಂದೆ ಒಂದು ವಾರದಿಂದ ಸಿದ್ಧಪಡಿಸಿದ್ದ ಕೊಂಡಕ್ಕೆ ಆಳೆತ್ತರ ಸೌದೆ ಜೋಡಿಸಿ ಅಗ್ನಿ ಸ್ಪರ್ಶ ಮಾಡಲಾಯಿತು. ಹರಕೆ ಹೊತ್ತವರು ಕೊಂಡಕ್ಕೆ ಕೊಬ್ಬರಿ ಮತ್ತು ಹರಳನ್ನು ಸಮರ್ಪಿಸಿದರು. ಫಕೀರರ ಜತೆ ಭಕ್ತರು ಕೂಡ ಕೊಂಡದ ಸುತ್ತ ನೃತ್ಯ ಮಾಡಿ ಸಂಭ್ರಮಿಸಿದರು.
ದೇವಾಲಯದ ಗುಡ್ಡಪ್ಪ ರಮೇಶ ನಿಗಿ ನಿಗಿ ಕೆಂಡದ ಮೇಲೆ ಹೆಜ್ಜೆ ಹಾಕಿದರು. ಕೊಂಡ ಹಾಯುವಾಗ ಉಘೇ ಬಾಬಯ್ಯ ಎಂಬ ಘೋಷಣೆಗಳು ಮೊಳಗಿದವು. ಹಿರೀಕರು ಹಸನ್, ಉಸೇನ್ ಜಿರಾಯು... ಎಂದು ಹಾಡಿದರು. ಭಾನುವಾರ ಸಂಜೆ ಕೂಡ ಫಕೀರ ವೇಶಧಾರಿಗಳು ಊರಿನ ಕಲ್ಯಾಣಿಯವರೆಗೆ ಮೆರವಣಿಗೆ ನಡೆಸಿದರು. ಅಲ್ಲಿಂದ ಬಾಬಯ್ಯನ ಗುಡಿ ಮುಂದಿನ ಕೊಂಡದತ್ತ ಧಾವಿಸಿದರು. ಕೊಂಡಕ್ಕೆ ಅಂತಿಮ ಪೂಜೆ ಸಲ್ಲಿಸಿದ ಬಳಿಕ ಬಾಬಯ್ಯನ ಹಬ್ಬ ಸಮಾಪ್ತಿಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.