ADVERTISEMENT

ಕೋವಿಡ್‌ ಕೇರ್‌ ಸೆಂಟರ್‌ಗಳಾಗಿ ಹಾಸ್ಟೆಲ್‌: ಚಿಂತನೆ

ಕೋವಿಡ್‌ ಕೇರ್‌ ಸೆಂಟರ್‌ ಆಗಿ ಪರಿವರ್ತಿಸುವ ಬಗ್ಗೆ ಪರಿಶೀಲಿಸಿದ ಸಚಿವ ಕೆ.ಸಿ.ನಾರಾಯಣಗೌಡ

​ಪ್ರಜಾವಾಣಿ ವಾರ್ತೆ
Published 7 ಮೇ 2021, 4:27 IST
Last Updated 7 ಮೇ 2021, 4:27 IST

ಮಂಡ್ಯ: ನಗರದ ಪಿಇಎಸ್‌ ಕಾಲೇಜು ವಿದ್ಯಾರ್ಥಿ ನಿಲಯಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಗುರುವಾರ ಭೇಟಿ ನೀಡಿ ಕೋವಿಡ್‌ ಕೇರ್‌ ಸೆಂಟರ್‌ ಆಗಿ ಪರಿವರ್ತನೆ ಮಾಡುವ ಬಗ್ಗೆ ಪರಿಶೀಲನೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನದಿಂದ ದಿನಕ್ಕೆ ನಗರದ ಹೆಚ್ಚಿನ ಜನರಲ್ಲಿ ಕೋವಿಡ್‌ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ ಮಾಡಲು ಚಿಂತಿಸಲಾಗಿದೆ. ಮೊದಲ ಹಂತವಾಗಿ ಎಂಜಿನಿಯರಿಂಗ್‌ ಕಾಲೇಜು ಹಾಸ್ಟೆಲ್‌, ನಂತರ ಬಾಲಕರ, ಬಾಲಕಿಯರ ಹಾಸ್ಟೆಲ್‌ ಪರಿಶೀಲಿಸಲಾಗಿದೆ. ಹಾಸ್ಟೆಲ್‌ನಲ್ಲಿ 1,500 ಸೋಂಕಿತರನ್ನು ಕ್ವಾರಂಟೈನ್‌ ಮಾಡಲು ಚಿಂತಿಸಲಾಗಿದೆ. ಈ ಬಗ್ಗೆ ಪಿಇಟಿ ಅಧ್ಯಕ್ಷ ಕೆ.ಎಸ್‌.ವಿಜಯಾನಂದ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು.

ಸೋಂಕಿತರ ಹೆಚ್ಚಾದ ಹಿನ್ನೆಲೆಯಲ್ಲಿ ಭೇಟಿ ನೀಡಲಾಗಿದ್ದು, ಈ ಬಗ್ಗೆ ಶೀಘ್ರ ತೀರ್ಮಾನಿಸಲಾಗುವುದು. ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ADVERTISEMENT

ಕಳೆದ ಬಾರಿ ಲಾಕ್‌ಡೌನ್‌ ಮಾಡಿದಾಗ ಹಲವಾರು ಆರೋಪಗಳು ಕೇಳಿ ಬಂದಿತ್ತು. ಈ ಬಾರಿ ಸಮಸ್ಯೆಯಾಗಬಾರದು ಎಂದು ಅಗತ್ಯ ವಸ್ತುಗಳ ಖರೀದಿಗೆ ಸಮಯ ನೀಡಲಾಗಿದೆ. ಆದರೂ ಜನರ ಓಡಾಟ ನಿಯಂತ್ರಿಸಲಾಗುತ್ತಿಲ್ಲ. ಮಂಡ್ಯದಲ್ಲಿ ಸಂಪೂರ್ಣ ಲಾಕ್‌ಡೌನ್‌ ಮಾಡುವ ಬಗ್ಗೆ ಶುಕ್ರವಾರ ಸಂಜೆ 4 ಗಂಟೆಗೆ ಆದಿಚುಂಚನಗಿರಿ ಮಠದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಜನಪ್ರತಿನಿಧಿಗಳ ಸಭೆ ನಡೆಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಜೆಡಿಎಸ್‌ ಶಾಸಕರು ಹೆಚ್ಚಾಗಿದ್ದಾರೆ. ಇದಕ್ಕೆ ಅವರ ಸಹಕಾರ ಅಗತ್ಯವಾಗಿದೆ. ಕೆಲವು ತೀರ್ಮಾನ ತೆಗೆದುಕೊಳ್ಳಲು ನನಗೆ ಅವಕಾಶ ನೀಡಿದ್ದಾರೆ. ಆದರೆ ಗೊಂದಲಕ್ಕೆ ಕಾರಣವಾಗಬಾರದು ಎಂದು ಶಾಸಕರ ಸಭೆ ಕರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.