
ಭಾರತೀನಗರ: ಬೆಂಗಳೂರಿನಲ್ಲಿ ಡಿ.21ರಂದು ನಡೆಯಲಿರುವ ಸಿಪಿಐ(ಎಂ) ಬೃಹತ್ ಪ್ರತಿಭಟನಾ ಬಹಿರಂಗ ಸಭೆಗೆ ಜಿಲ್ಲೆಯಿಂದ 5 ಸಾವಿರ ಮಂದಿ ಕೃಷಿ ಕೂಲಿಕಾರರು, ಕಾರ್ಮಿಕರು ತೆರಳಲಿದ್ದಾರೆ ಎಂದು ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು ತಿಳಿಸಿದರು.
ಸಮೀಪದ ಯಲಾದಹಳ್ಳಿ ಗ್ರಾಮದಲ್ಲಿ ಸಿಪಿಐ(ಎಂ) ಹಮ್ಮಿಕೊಂಡಿರುವ ಮನೆ ಮನೆ ಭೇಟಿ ಸಹಿ ಸಂಗ್ರಹ ನಡೆಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ‘ಕಳೆದ ಮೂರು ದಿನದಿಂದ ನಡೆದ ಬೆಳವಣಿಗೆಯು ದೇಶದ ಮಾನವನ್ನು ಹರಾಜು ಹಾಕುವಂತದ್ದಾಗಿದೆ. ಇಂಡಿಗೋ ವಿಮಾನ ಸಂಸ್ಥೆಯಲ್ಲಿ 3,500 ವಿಮಾನಗಳು ಏಕಸ್ವಾಮ್ಯದಲ್ಲಿದ್ದು, ಇವು ಏಕಾಏಕಿ ಹಾರಾಟ ನಿಲ್ಲಿಸಿದ್ದರಿಂದ ಪ್ರಯಾಣಿಕರ ಆರೋಗ್ಯದ ಮೇಲೆ ದೊಡ್ಡ ಪರಿಣಾಮವನ್ನು ಬೀರಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಕೂಡ ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದು, ಕಾವೇರಿ 5ನೇ ಹಂತದ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿರುವುದು ಮಂಡ್ಯ ಜಿಲ್ಲೆಯ ರೈತರ ಪಾಲಿಗೆ ಮರಣಶಾಸನವಾಗಿದೆ. ಇದಲ್ಲದೆ ದೇವನಹಳ್ಳಿ ಬಳಿ 2,777 ಎಕರೆ ಡಿನೋಟಿಫೈ ಮಾಡ್ತೇವೆ ಅಂತೇಳಿ ಸಹಿಮಾಡಿದ್ದಲ್ಲದೆ ಶಾಶ್ವತ ಕೃಷಿ ವಲಯ ಎಂದು ಘೋಷಿಸಿದ್ದಾರೆ. ಇದು ರೈತರ ಮೇಲೆ ಸೇಡು ತೀರಿಸಿಕೊಳ್ಳವುದಾಗಿದೆ. ಕೂಲಿಕಾರರಿಗೆ ಇಕೆವೈಸಿ ಮಾಡುವುದು ಸರಿಯಾದ ಕ್ರಮವಲ್ಲಿ. ಈಗಿರುವಂತೆ ಮುಂದುವರೆಸಬೇಕು’ ಎಂದು ಆಗ್ರಹಿಸಿದರು.
ಸಿಪಿಐ(ಎಂ)ನ ಜಿಲ್ಲಾ ಕರ್ಯದರ್ಶಿ ಮಂಡಳಿ ಸದಸ್ಯ ಹನುಮೇಶ್, ಕೃಷಿ ಕೂಲಿಕಾರರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಟಿ.ಪಿ.ಅರುಣ್‌ಕುಮಾರ್, ಕಾರ್ಯದರ್ಶಿ ವೈ.ಎಸ್.ಶೋಭಾ, ಜಿಲ್ಲಾ ಸಮಿತಿ ಸಹಕಾರ್ಯದರ್ಶಿ ಅನಿತಾ, ಮುಖಂಡರಾದ ಬೋರೇಗೌಡ, ಭಾಗ್ಯ, ಪವಿತ್ರ, ಸಾಕಮ್ಮ, ಮಂಜುಳಾ, ಶಿವಮ್ಮ, ಜ್ಯೋತಿ, ಬಿದರಹಳ್ಳಿ ಜಯಮ್ಮ, ಮಹೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.