
ಮದ್ದೂರು: ತಾಲೂಕಿನ ನಗರಕೆರೆ ಗ್ರಾಮದಲ್ಲಿ ನಿರ್ಮಿಸಿರುವ ಹುಚ್ಚಮ್ಮ ತಾಯಿ ದೇವಸ್ಥಾನದ ಲೋಕಾರ್ಪಣೆ ಮತ್ತು ಕುಂಭಾಭಿಷೇಕ ಪೂಜಾ ಮಹೋತ್ಸವ ಕಾರ್ಯಕ್ರಮ ಸೋಮವಾರ ಸಾವಿರಾರು ಭಕ್ತರ ನಡುವೆ ಸಂಭ್ರಮದಿಂದ ನೆರವೇರಿತು.
ಉತ್ಸವದ ಮೀಸಲು ನೀರು ತರುವುದು, ವೀರಗಾಸೆ ಗ್ರಾಮದೇವತೆಗಳ ಮೆರವಣಿಗೆ ಅದ್ದೂರಿಯಾಗಿ ನಡೆದಿತ್ತು.
ಸೋಮವಾರ ಮೈಸೂರಿನ ಪ್ರಸನ್ನ ಭಟ್ ಅವರಿಂದ ಹೋಮ, ಕುಂಭಾಭಿಷೇಕ ಹಾಗೂ ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಮಧ್ಯಾಹ್ನ 12.30ಕ್ಕೆ ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆಯಿಂದ ಸಂಜೆಯವರೆಗೆ ದೇವಾಲಯದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮ, ತಾಲ್ಲೂಕು ಸೇರಿದಂತೆ ಹಲವು ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು.
ಶಾಸಕ ಕೆ.ಎಂ.ಉದಯ್ ಸೇರಿದಂತೆ ಹಲವರು ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಶ್ರೀ ತಾಯಿ ಹುಚ್ಚಮ್ಮ ದೇವಾಲಯದ ಟ್ರಸ್ಟ್ ಅಧ್ಯಕ್ಷ ದೊಡ್ಡ ಯಜಮಾನ್ ವಿಷಕಂಠಯ್ಯ, ಉಪಾಧ್ಯಕ್ಷ ಯಜಮಾನ್ ಎನ್.ಎಲ್.ಲಿಂಗರಾಜು, ಕಾರ್ಯದರ್ಶಿ ಎನ್.ಎಲ್.ಕೃಷ್ಣ, ಖಜಾಂಚಿ ಎನ್.ಎಚ್, ಶಿವಲಿಂಗಯ್ಯ, ಸಹ ಕಾರ್ಯದರ್ಶಿ ಎನ್.ಎಸ್.ಸೋಮಶೇಖರ್, ಸದಸ್ಯರಾದ ಯಜಮಾನ್ ಎನ್.ಪಿ. ಶಿವಲಿಂಗಯ್ಯ, ಯಜಮಾನ್ ಎನ್.ಡಿ.ಶಿವಚರಣ್ (ಸಂದೀಪ್), ಯಜಮಾನ್ ಶಿವರಾಮಯ್ಯ, ಯಜಮಾನ್ ಪಿಚ್ಚೆವಿಷಕಂಠಯ್ಯ, ಎನ್.ಜಿ.ನಿಂಗೇಗೌಡ ಹಾಜರಿದ್ದರು.