ADVERTISEMENT

ಶ್ರೀರಂಗಪಟ್ಟಣ– ರಾಂಪುರ ಸೇತುವೆಯ ದುಸ್ಥಿತಿ: ಸವಾರರು ಆಯ ತಪ್ಪಿದರೆ ಹೊಳೆ ಪಾಲು!

ಗಣಂಗೂರು ನಂಜೇಗೌಡ
Published 9 ಮೇ 2025, 8:36 IST
Last Updated 9 ಮೇ 2025, 8:36 IST
ಶ್ರೀರಂಗಪಟ್ಟಣದಿಂದ ಪಾಂಡವಪುರ ಮತ್ತು ಕೆ.ಆರ್‌. ಪೇಟೆ ತಾಲ್ಲೂಕುಗಳ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕಾವೇರಿ ನದಿ ಉತ್ತರ ಸೇತುವೆ ಮೇಲೆ ಜೀವ ಕೈಯಲ್ಲಿಡಿದು ವಾಹನ ಚಲಾಯಿಸುತ್ತಿರುವುದು
ಶ್ರೀರಂಗಪಟ್ಟಣದಿಂದ ಪಾಂಡವಪುರ ಮತ್ತು ಕೆ.ಆರ್‌. ಪೇಟೆ ತಾಲ್ಲೂಕುಗಳ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕಾವೇರಿ ನದಿ ಉತ್ತರ ಸೇತುವೆ ಮೇಲೆ ಜೀವ ಕೈಯಲ್ಲಿಡಿದು ವಾಹನ ಚಲಾಯಿಸುತ್ತಿರುವುದು   

ಶ್ರೀರಂಗಪಟ್ಟಣ: ಪಟ್ಟಣದಿಂದ ಪಾಂಡವಪುರ ಮತ್ತು ಕೆ.ಆರ್‌. ಪೇಟೆ ತಾಲ್ಲೂಕುಗಳ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕಾವೇರಿ ನದಿ ಉತ್ತರ ಸೇತುವೆ ಸುರಕ್ಷಿತವಾಗಿ ಇಲ್ಲದೇ ಇರುವುದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಜೀವ ಕೈಯಲ್ಲಿಡಿದುಕೊಂಡು ಓಡಾಡುತ್ತಿದ್ದಾರೆ.

ಕಾವೇರಿ ನದಿಗೆ ಅಡ್ಡಲಾಗಿರುವ ಈ ಸೇತುವೆಯನ್ನು ಮೀಟರ್‌ ಗೇಜ್‌ ರೈಲು ಮಾರ್ಗಕ್ಕಾಗಿ 50 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ರೈಲ್ವೆ ಮಾರ್ಗ ಬ್ರಾಡ್‌ ಗೇಜ್‌ಗೆ ಪರಿವರ್ತನೆಯಾದ ನಂತರ ಇದರ ಪಕ್ಕದಲ್ಲೇ ಮತ್ತೊಂದು ರೈಲು ಮಾರ್ಗ ನಿರ್ಮಾಣವಾಯಿತು. ಇದಾದ ಬಳಿಕ ಖಾಲಿ ಇದ್ದ ಹಳೇ ರೈಲು ಮಾರ್ಗದಲ್ಲಿ ವಾಹನಗಳು ಮತ್ತು ಜನರ ಓಡಾಟ ಶುರುವಾಯಿತು. ಈ ಭಾಗದ ಜನರಿಗೆ ಕಳೆದ 30 ವರ್ಷಗಳಿಂದ ಹಳೇ ರೈಲ್ವೆ ಸೇತುವೆಯೇ ಮುಖ್ಯ ಸಂಪರ್ಕ ಕೊಂಡಿಯಾಗಿದೆ.

ತಾಲ್ಲೂಕಿನ ರಾಂಪುರ, ಅಚ್ಚಪ್ಪನಕೊಪ್ಪಲು, ಆರತಿ ಉಕ್ಕಡದ ಅಹಲ್ಯಾದೇವಿ ದೇವಾಲಯ, ದೊಡ್ಡೇಗೌಡನಕೊಪ್ಪಲು, ಕಡತನಾಳು, ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ, ಹರವು, ಅರಳಕುಪ್ಪೆ, ಕಟ್ಟೇರಿ, ಹೊಸ ಕನ್ನಂಬಾಡಿ, ಎಣ್ಣೆಹೊಳೆಕೊಪ್ಪಲು, ಬಿ.ಟಿ. ಕೊಪ್ಪಲು, ಚಲುವರಸನಕೊಪ್ಪಲು, ಬನ್ನಂಗಾಡಿ, ಡಿಂಕಾ, ಕೆ.ಆರ್‌. ಪೇಟೆ ತಾಲ್ಲೂಕಿನ ಭೂ ವರಾಹನಾಥ ಕಲ್ಲಹಳ್ಳಿ, ಬಲ್ಲೇನಹಳ್ಳಿ ಇತರ ಗ್ರಾಮಗಳಿಗೆ ಇದು ಸಂಪರ್ಕ ಕೊಂಡಿಯಾಗಿದೆ. ಹತ್ತಾರು ಕಿಲೋ ಮೀಟರ್ ದೂರ ಸುತ್ತಿ ಬಳಸಿ ಓಡಾಡುತ್ತಿದ್ದವರು ಸಮಯ ಮತ್ತು ಇಂಧನ ಉಳಿಸುವ ದೃಷ್ಟಿಯಿಂದ ಈ ಮಾರ್ಗದಲ್ಲೇ ಸಂಚರಿಸುತ್ತಿದ್ದಾರೆ.

ADVERTISEMENT

‘ಪಟ್ಟಣ ಹಾಗೂ ಮೈಸೂರಿನ ವಿವಿಧ ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಆರತಿಉಕ್ಕಡ, ಭೂ ವರಾಹನಾಥಸ್ವಾಮಿ ದೇವಾಲಯ, ಡಿಂಕದಮ್ಮ ದೇವಾಲಯಕ್ಕೆ ಹೋಗುವವರು ಹಾಗೂ ಕಚೇರಿ ಕೆಲಸ, ವ್ಯಾಪಾರ– ವಹಿವಾಟು ಉದ್ದೇಶಕ್ಕೆ ಬರುವವರು ಮೂರು ದಶಕಗಳಿಂದ ಈ ಮಾರ್ಗವನ್ನೇ ಅವಲಂಬಿಸಿದ್ದಾರೆ. ಆದರೆ ಈ ಸೇತುವೆ ಮೇಲಿನ ರಸ್ತೆಗೆ ರಕ್ಷಣಾ ಗೋಡೆಯೇ ಇಲ್ಲ. ಕೇವಲ 6 ಅಡಿ ಅಗಲದ, 200 ಮೀಟರ್‌ ಉದ್ದದ ಈ ಸೇತುವೆಯ ಮಧ್ಯ ಭಾಗದಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಸಣ್ಣ ಮಳೆ ಸುರಿದರೂ ಮಂಡಿಯುದ್ದ ನೀರು ನಿಲ್ಲುತ್ತದೆ. ಆಯ ತಪ್ಪಿ ನದಿಗೆ ಬಿದ್ದರೆ ಬದುಕುಳಿಯುವುದು ಕಷ್ಟ’ ಎಂದು ದರಸಗುಪ್ಪೆ ಗ್ರಾಮ ಪಂಚಾಯಿತಿ ಸದಸ್ಯ ರಾಂಪುರ ಮುರಳಿ ಆತಂಕ ವ್ಯಕ್ತಪಡಿಸುತ್ತಾರೆ.

ಶ್ರೀರಂಗಪಟ್ಟಣದ ಕಾವೇರಿ ನದಿ ಉತ್ತರ ಸೇತುವೆಯ ಮೇಲೆ ಮಳೆ ನೀರು ನಿಂತಿರುವುದು

₹1 ಕೋಟಿ ಅನುದಾನಕ್ಕೆ ಪ್ರಸ್ತಾವ

‘ಪಟ್ಟಣದಿಂದ ರಾಂಪುರ ಇತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹಳೇ ರೈಲ್ವೆ ಸೇತುವೆ ಎರಡು ವರ್ಷಗಳ ಹಿಂದೆಯೇ ರೈಲ್ವೆ ಇಲಾಖೆಯಿಂದ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರವಾಗಿದೆ. ಸೇತುವೆ ಮೇಲಿನ ರಸ್ತೆ ಅಭಿವೃದ್ಧಿ ಮತ್ತು ರೇಲಿಂಗ್ಸ್‌ ಹಾಕಲು ₹1 ಕೋಟಿ ಅನುದಾನ ಕೋರಿ ನಾಲ್ಕು ತಿಂಗಳ ಹಿಂದೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇನ್ನೂ ಉತ್ತರ ಬಂದಿಲ್ಲ’ ಎಂದು ಲೋಕೋಪಯೋಗಿ ಇಲಾಖೆ ಎಇಇ ಜಸ್ವಂತ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.