ADVERTISEMENT

ಮಂಡ್ಯ: ಅನೈತಿಕ ಚಟುವಟಿಕೆಯ ತಾಣವಾದ ಆಸರೆ ಮನೆ

ಕುಡುಕರ ಅಡ್ಡೆಯಾದ ಶ್ರಮಿಕರ ಸೂರು, ಭದ್ರತೆ ನೀಡಲು ಕೊಳಚೆ ನಿರ್ಮೂಲನಾ ಮಂಡಳಿ ವಿಫಲ

ಎಂ.ಎನ್.ಯೋಗೇಶ್‌
Published 23 ಆಗಸ್ಟ್ 2020, 19:30 IST
Last Updated 23 ಆಗಸ್ಟ್ 2020, 19:30 IST
ಹಾಲಹಳ್ಳಿ ಕೊಳೆಗೇರಿ ನಿವಾಸಿಗಳಿಗೆ ನಿರ್ಮಿಸಿರುವ ಹೊಸ ಮನೆ ಕುಡುಕರ ತಾಣವಾಗಿರುವುದು
ಹಾಲಹಳ್ಳಿ ಕೊಳೆಗೇರಿ ನಿವಾಸಿಗಳಿಗೆ ನಿರ್ಮಿಸಿರುವ ಹೊಸ ಮನೆ ಕುಡುಕರ ತಾಣವಾಗಿರುವುದು   

ಮಂಡ್ಯ: ಹಾಲಹಳ್ಳಿ ಶ್ರಮಿಕರಿಗಾಗಿ ಕೊಳಚೆ ನಿರ್ಮೂಲನಾ ಮಂಡಳಿ ಕಟ್ಟಿರುವ ಆಸರೆ ಮನೆಗಳು ಕಿಡಿಗೇಡಿಗಳ ಅನೈತಿಕ ಚಟುವಟಿಕೆಯ ತಾಣವಾಗಿವೆ. ಹಂಚಿಕೆ ಮಾಡಲು ಅಧಿಕಾರಿ ವರ್ಗ ಮೀನಾಮೇಷ ಎಣಿಸುತ್ತಿರುವ ಹಿನ್ನೆಲೆಯಲ್ಲಿ ಹೊಸ ಮನೆಗಳು ಪಾಳು ಕಟ್ಟಡಗಳ ರೂಪ ಪಡೆಯುತ್ತಿವೆ.

ಕಾಮಗಾರಿ ಪೂರ್ಣಗೊಂಡು ಒಂದೂವರೆ ವರ್ಷ ಕಳೆದಿದೆ. ನೀರು, ವಿದ್ಯುತ್‌ ಹಾಗೂ ಚರಂಡಿ ಸಂಪರ್ಕ ಸೇರಿ ಮೂಲ ಸೌಲಭ್ಯ ಕರುಣಿಸಿದರೆ ತಕ್ಷಣವೇ ನಿವಾಸಿಗಳನ್ನು ಹೊಸ ಮನೆಗಳಿಗೆ ಸ್ಥಳಾಂತರ ಮಾಡಬಹುದು. ಆ ಮೂಲಕ ಸಂಕಷ್ಟದ ನಡುವೆ ಜೀವನ ನಡೆಸುತ್ತಿರುವ ಶ್ರಮಿಕರಿಗೆ ನೆಮ್ಮದಿಯ ಜೀವನ ಕರುಣಿಸಬಹುದು. ಆದರೆ ಶಾಸಕರೂ ಸೇರಿದಂತೆ ಜಿಲ್ಲಾಧಿಕಾರಿ, ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಬಡಜನರಿಗೆ ಮನೆ ಹಂಚಿಕೊಡುವ ದೊಡ್ಡ ಮನಸ್ಸು ಮಾಡುತ್ತಿಲ್ಲ.

ಮನೆಗಳು ಪಾಳು ಬಿದ್ದಿರುವ ಹಿನ್ನಲೆಯಲ್ಲಿ ಕಿಡಿಗೇಡಿಗಳು ಮನೆಗಳನ್ನು ಹೊಕ್ಕು ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ. ಕುಡುಕರು ರಾತ್ರಿಯಿಡೀ ಕುಡಿದು ಅಲ್ಲೇ ಮಲಗುತ್ತಿದ್ದಾರೆ. ರಾತ್ರಿಯ ವೇಳೆ ಮಾತ್ರವಲ್ಲ, ಹಗಲಿನಲ್ಲೇ ಮನೆಯೊಳಗೆ ತೆರಳಿ ಕುಡಿತದ ತಾಣ ಮಾಡಿಕೊಂಡಿದ್ದಾರೆ. ಮದ್ಯದ ಬಾಟಲಿಗಳು, ಪಾಕೀಟುಗಳು ಮನೆಯೊಳೆಗೆ ಬಿದ್ದು ಚೆಲ್ಲಾಡುತ್ತಿವೆ. ಮನೆಯೊಳಗೆ ಭೇಟಿ ನೀಡಿದರೆ ಇಸ್ಪೀಟ್‌ ಹಾಳೆಗಳು, ಮಾಂಸದ ಮೂಲೆಗಳ ದರ್ಶನವಾಗುತ್ತದೆ.

ADVERTISEMENT

ಮನೆಯೊಳಗೆ ನಿರ್ಮಿಸಿರುವ ಟ್ಲಾಯ್ಲೆಟ್‌ಗೆ ಇನ್ನೂ ನೀರಿನ ಸಂಪರ್ಕ ಕಲ್ಪಿಸಿಲ್ಲ. ಆದರೆ ಕಿಡಿಗೇಡಿಗಳು ಅಲ್ಲಿಯೇ ಮೂತ್ರ ವಿಸರ್ಜನೆ ಮಾಡಿ ಹೋಗಿದ್ದಾರೆ. ಇದರಿಂದ ದುರ್ವಾಸನೆ ಮೂಗಿಗೆ ಬಡಿಯುತ್ತಿದೆ. ಕೆಲವರಂತೂ ಅವುಗಳನ್ನು ಸ್ವಂತ ಮನೆಯನ್ನೇ ಮಾಡಿಕೊಂಡಿದ್ದು ರಗ್ಗು, ದಿಂಬು ತಂದು ಇಟ್ಟುಕೊಂಡಿದ್ದಾರೆ. ರಾತ್ರಿಯಾಗುತ್ತಿದ್ದಂತೆ ತಿಂದು, ಕುಡಿದು, ಅಲ್ಲಿಯೇ ಮಲಗಿ ನಿದ್ದೆ ಮಾಡಿ ಬೆಳಿಗ್ಗೆ ತೆರಳುತ್ತಿದ್ದಾರೆ.

ಈ ಕುರಿತು ಸ್ಥಳೀಯ ನಿವಾಸಿಗಳು ಹಲವು ಬಾರಿ ಕೊಳಚೆ ನಿರ್ಮೂಲನಾ ಮಂಡಳಿ ಸಿಬ್ಬಂದಿ ಹಾಗೂ ಗುತ್ತಿಗೆದಾರರ ಗಮನಕ್ಕೆ ತಂದಿದ್ದಾರೆ. ಕಿಡಿಗೇಡಿಗಳ ಕೃತ್ಯದ ಬಗ್ಗೆ ಛಾಯಾಚಿತ್ರ, ವಿಡಿಯೊ ಸಮೇತ ಅಧಿಕಾರಿಗಳ ಮುಂದಿಟ್ಟಿದ್ದಾರೆ. ಆದರೆ ಕಿಡಿಗೇಡಿಗಳ ಹಾವಳಿ ತಡೆಯುವಲ್ಲಿ ಮಂಡಳಿ ಅಧಿಕಾರಿಗಳು ವಿಫಲರಾಗಿದ್ದಾರೆ.

‘ಮಧ್ಯರಾತ್ರಿ ವೇಳೆ ಬೈಕ್‌ನಲ್ಲಿ ಜೋರಾಗಿ ಶಬ್ಧ ಮಾಡಿಕೊಂಡು ಬರುತ್ತಾರೆ. ಪಾಕೀಟುಗಳಲ್ಲಿ ಮದ್ಯ, ಮಾಂಸ, ಊಟ ತಂದು ರಾತ್ರಿಯಿಡೀ ಇಸ್ಪೀಟ್‌ ಆಡುತ್ತಾರೆ. ಜೋರಾಗಿ ಹಾಡಿ ಹಾಕಿಕೊಂಡು ನೃತ್ಯ ಮಾಡುತ್ತಾರೆ. ಕೇಳಿದರೆ ನಮ್ಮ ಮೇಲೆ ಹಲ್ಲೆ ಮಾಡಲು ಬರುತ್ತಾರೆ. ನಾವು ಭಯದಿಂದ ಅವರ ಹತ್ತಿರವೂ ಸುಳಿಯುವುದಿಲ್ಲ’ ಎಂದು ಬಡಾವಣೆಯ ನಿವಾಸಿ ಕುಮಾರ್‌ ಹೇಳುತ್ತಾರೆ.

ಕಾವಲುಗಾರರಿಗೆ ಬೆದರಿಕೆ: ಸ್ಥಳೀಯರ ಒತ್ತಾಯಕ್ಕೆ ಮಣಿದು ಮಂಡಳಿ ಅಧಿಕಾರಿಗಳು ಕೇವಲ ಇಬ್ಬರು ಕಾವಲುಗಾರರನ್ನು ನೇಮಕ ಮಾಡಿದ್ದಾರೆ. ಆದರೆ 17 ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತಿರುವ 632 ಮನೆಗಳಲ್ಲಿ ಕೇವಲ ಇಬ್ಬರು ಕಾವಲುಗಾರರು ಇದ್ದು ಯಾವ ಮನೆಗಳಿಗೆ ಭದ್ರತೆ ನೀಡಬೇಕು ಎಂಬುದು ಗೊಂದಲಮಯವಾಗಿದೆ. ನೇಮಕ ಮಾಡಿಕೊಂಡಿರುವ ಇಬ್ಬರೂ ಕಾವಲುಗಾರರಿಗೆ ವಯಸ್ಸಾಗಿದ್ದು ಕಿಡಿಗೇಡಿಗಳನ್ನು ನಿಯಂತ್ರಣ ಮಾಡುವುದು ಸಾಹಸವಾಗಿದೆ.

‘ಇಲ್ಲಿ ಬರಬೇಡಿ ಎಂದು ಪ್ರಶ್ನೆ ಮಾಡಿದರೆ ನಮ್ಮ ಮೇಲೆಯೇ ಹಲ್ಲೆ ಮಾಡಲು ಬರುತ್ತಾರೆ. ಬೆದರಿಕೆ ಹಾಕುತ್ತಾರೆ. ಎಲ್ಲರೂ ಕುಡಿದು ಮತ್ತಿನಲ್ಲಿ ಇರುತ್ತಾರೆ. ಹೀಗಾಗಿ ನಮಗೂ ಭಯವಾಗುತ್ತದೆ’ ಎಂದು ಕಾವಲುಗಾರರು ನೋವು ವ್ಯಕ್ತಪಡಿಸಿದರು.

ಕಿಟಕಿ, ಬಾಗಿಲಿಗೆ ಕಲ್ಲು
ಎಲ್ಲಾ ಮನೆಗಳ ಬಾಗಿಲು ಬಂದ್‌ ಮಾಡಿ, ಬೀಗ ಹಾಕಲಾಗಿದೆ. ಆದರೆ ಕಿಡಿಗೇಡಿಗಳು ಬೀಗ ಮುರಿದು ಮನೆಯೊಳಗೆ ನುಗ್ಗುತ್ತಿದ್ದಾರೆ. ಫೈವುಡ್‌ ಶೀಟ್‌ಗಳಿಂದ ಮಾಡಿರುವ ಕೆಲ ಮನೆಗಳ ಬಾಗಿಲುಗಳನ್ನು ಮುರಿದು ಒಳ ನುಗ್ಗಲಾಗಿದೆ. ಕುಡಿದ ಮತ್ತಿನಲ್ಲಿ ಕಿಟಕಿಗಳಿಗೆ ಕಲ್ಲು ತೂರಲಾಗಿದೆ. ಮನೆ ಮುಂದೆ ಗಾಜಿನ ಚೂರುಗಳು ಬಿದ್ದು ಚೆಲ್ಲಾಡುತ್ತಿವೆ.

‘ಮನೆ ಹಂಚಿಕೆ ಮಾಡಲು ಇನ್ನೂ ತಡವಾದರೆ ಈ ಆಶ್ರಯ ಮನೆಗಳು ಭೂತ ಬಂಗಲೆಗಳಾಗುತ್ತವೆ. ಮುಂದೆ ಜನರು ಇಲ್ಲಿ ವಾಸ ಮಾಡಲು ನಿರಾಕರಣೆ ಮಾಡಬಹುದು. ಅನೈತಿಕ ಚಟುವಟಿಕೆಗಳನ್ನು ತಡೆದು ಆದಷ್ಟು ಬೇಗ ಮನೆ ಹಂಚಿಕೆಗೆ ಜಿಲ್ಲಾಡಳಿತ ಆದ್ಯತೆ ನೀಡಬೇಕು’ ಎಂದು ನಿವಾಸಿಗಳು ಮನವಿ ಮಾಡಿದರು.

**
ಕಿಡಿಗೇಡಿಗಳು ಮನೆಗಳಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿರುವ ವಿಚಾರ ಗೊತ್ತಾಗಿದೆ. ಸ್ಥಳೀಯ ಪೊಲೀಸರ ಸಹಾಯ ಪಡೆದು ದುಷ್ಕರ್ಮಿಗಳನ್ನು ತಡೆಯಲಾಗುವುದು.
–ರಾಮಚಂದ್ರ, ಎಇಇ, ಕೊಳಚೆ ನಿರ್ಮೂಲನಾ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.