ADVERTISEMENT

ಅಕ್ರಮ ಸಾಗಣೆ: 10 ಟನ್‌ ಪಡಿತರ ಅಕ್ಕಿ ವಶ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 10:50 IST
Last Updated 13 ಅಕ್ಟೋಬರ್ 2018, 10:50 IST

ಭಾರತೀನಗರ: ಅನ್ನಭಾಗ್ಯ ಯೋಜನೆಯಡಿ ಪಡಿತರದಾರರಿಗೆ ವಿತರಿಸಬೇಕಿದ್ದ 10 ಟನ್‌ ಅಕ್ಕಿಯನ್ನು ಅಕ್ರಮವಾಗಿ ಬೇರೆಡೆಗೆ ಸಾಗಾಟ ಮಾಡುತ್ತಿದ್ದ ಗೂಡ್ಸ್‌ ಟೆಂಪೊವನ್ನು ಇಲ್ಲಿನ ಪೊಲೀಸರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.

ರೈತ ಸಂಘದ ಮುಖಂಡ ಅಣ್ಣೂರು ಮಹೇಂದ್ರ ಅವರ ಮಾಹಿತಿಯ ಮೇರೆಗೆ,ಭಾರತೀನಗರ ಪೊಲೀಸರು ಮಂಡ್ಯ ಕಡೆಗೆ ತೆರಳುತ್ತಿದ್ದ ವಾಹನವನ್ನು ಇಲ್ಲಿನ ಹಲಗೂರು ರಸ್ತೆಯಲ್ಲಿ ವಶಕ್ಕೆ ಪಡೆದು ಚಾಲಕ ಶಫೀಉಲ್ಲಾ ಖಾನ್‌ ಅವರನ್ನು ವಿಚಾರಣೆ ನಡೆಸಿದಾಗ ಅಕ್ರಮ ಪತ್ತೆಯಾಗಿದೆ.

ಟೆಂಪೊ ಕನಕಪುರದಿಂದ ಹಲಗೂರು ಮಾರ್ಗವಾಗಿ ಮಂಡ್ಯ ಕಡೆಗೆ ತೆರಳುತ್ತಿತ್ತು. ಮಂಡ್ಯದ ರೈಸ್‌ಮಿಲ್‌ ಒಂದರಲ್ಲಿ ಪಡಿತರ ಅಕ್ಕಿಯನ್ನು ಪಾಲಿಷ್‌ ಮಾಡಿ ಬೇರೆ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ತಲಾ 50 ಕೆ.ಜಿ.ಯಂತೆ 209 ಮೂಟೆಗಳಿದ್ದ ಅಕ್ಕಿಯನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ADVERTISEMENT

ಆಹಾರ ನಿರೀಕ್ಷಕಿ ಮಹಾಲಕ್ಷ್ಮಿ, ಎಎಸ್‌ಐ ಗೋವಿಂದಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.