ADVERTISEMENT

ನಾಲೆ, ಸರ್ಕಾರಿ ಜಾಗದಲ್ಲಿ ಗೋಡೆ ನಿರ್ಮಾಣ: ತೆರವುಗೊಳಿಸಲು ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:47 IST
Last Updated 29 ಜನವರಿ 2026, 6:47 IST
ಶ್ರೀರಂಗಪಟ್ಟಣ ತಾಲ್ಲೂಕಿನ ಮೇಳಾಪುರ ಬಳಿ ಖಾಸಗಿ ವ್ಯಕ್ತಿಯೊಬ್ಬರು ನಾಲೆ ಮತ್ತು ಸರ್ಕಾರಿ ಖರಾಬು ಜಾಗವನ್ನು ಅತಿಕ್ರಮಿಸಿ ಗೋಡೆ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಹಾಗೂ ತೆರವುಗೊಳಿಸಲು ಆಗ್ರಹಿಸಿ ಗ್ರಾಮದ ರೈತರು ಬುಧವಾರ ಸ್ಥಳಕ್ಕೆ ತೆರಳಿ ಪ್ರತಿಭಟನೆ ನಡೆಸಿದರು
ಶ್ರೀರಂಗಪಟ್ಟಣ ತಾಲ್ಲೂಕಿನ ಮೇಳಾಪುರ ಬಳಿ ಖಾಸಗಿ ವ್ಯಕ್ತಿಯೊಬ್ಬರು ನಾಲೆ ಮತ್ತು ಸರ್ಕಾರಿ ಖರಾಬು ಜಾಗವನ್ನು ಅತಿಕ್ರಮಿಸಿ ಗೋಡೆ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಹಾಗೂ ತೆರವುಗೊಳಿಸಲು ಆಗ್ರಹಿಸಿ ಗ್ರಾಮದ ರೈತರು ಬುಧವಾರ ಸ್ಥಳಕ್ಕೆ ತೆರಳಿ ಪ್ರತಿಭಟನೆ ನಡೆಸಿದರು   

ಶ್ರೀರಂಗಪಟ್ಟಣ: ತಾಲ್ಲೂಕಿನ ಮೇಳಾಪುರ ಬಳಿ ಖಾಸಗಿ ವ್ಯಕ್ತಿಯೊಬ್ಬರು ಸಾರ್ವಜನಿಕ ನಾಲೆ ಮತ್ತು ಸರ್ಕಾರಿ ಖರಾಬು ಜಾಗವನ್ನು ಅತಿಕ್ರಮಿಸಿ ಗೋಡೆ ನಿರ್ಮಿಸಿದ್ದು ಅದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಮದ ರೈತರು ಬುಧವಾರ ಪ್ರತಿಭಟನೆ ನಡೆಸಿದರು.

ಮೇಳಾಪುರ– ಮಹದೇವಪುರ ಸಂಪರ್ಕ ರಸ್ತೆಯಲ್ಲಿ ನಿರ್ಮಿಸುತ್ತಿರುವ ಆಲ್ಫಾ ವೆಲ್‌ನೆಸ್‌ ರೆಸಾರ್ಟ್‌ ಎದುರು ಒಂದು ತಾಸು ಪ್ರತಿಭಟನೆ ನಡೆಸಿದ ರೈತರು ರೆಸಾರ್ಟ್‌ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ರೆಸಾರ್ಟ್‌ ಮಾಲೀಕರು ಸ.ನಂ. 182ರಲ್ಲಿ ವಿರಿಜಾ ನಾಲೆಯ ವಿತರಣಾ ನಾಲೆಯ ಏರಿ ಮತ್ತು ಒಂದು ಎಕರೆಗೂ ಹೆಚ್ಚು ಸರ್ಕಾರಿ ಖರಾಬು ಜಾಗವನ್ನು ಅತಿಕ್ರಮಿಸಿದ್ದಾರೆ. ರಾತ್ರೋ ರಾತ್ರಿ ಗೋಡೆ ನಿರ್ಮಿಸಿದ್ದಾರೆ. ಪ್ರಶ್ನಿಸುವ ರೈತರ ಮೇಲೆ ಮೈಸೂರಿನಿಂದ ರೌಡಿಗಳನ್ನು ಕರೆಸಿ ಬೆದರಿಕೆ ಹಾಕಿಸುತ್ತಿದ್ದಾರೆ’ ಎಂದು ರೈತ ಕುಮಾರ್‌ ದೂರಿದರು.

ADVERTISEMENT

‘ಆಲ್ಫಾ ವೆಲ್‌ನೆಸ್ ರೆಸಾರ್ಟ್‌ ಮಾಲೀಕ ಮೈಸೂರಿನ ರಿಜ್ವಾನ್‌ ಎಂಬವರು ಒಂದು ಕೋಟಿ ರೂಪಾಯಿಗೂ ಹೆಚ್ಚು ಬೆಲೆ ಬಾಳುವ ಸರ್ಕಾರಿ ಜಾಗವನ್ನು ಅತಿಕ್ರಮಿಸಿದ್ದಾರೆ. ನಾಲೆಯನ್ನೂ ಸೇರಿಸಿ ಸಿಮೆಂಟ್‌ ಮತ್ತು ಕಬ್ಬಿಣದ ಗೋಡೆ ನಿರ್ಮಿಸಿಕೊಂಡಿದ್ದಾರೆ. ಇದರಿಂದ ಜನ, ಜಾನುವಾರು ಓಡಾಟಕ್ಕೆ ತೊಂದರೆಯಾಗಿದೆ. ನೀರಾವರಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸ್ಥಳಕ್ಕೆ ಬಾರದೆ ಸಬೂಬು ಹೇಳುತ್ತಿದ್ದಾರೆ’ ಎಂದು ರೈತ ಮಧು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರಿ ಜಾಗ ಅತಿಕ್ರಮ ಸಂಬಂಧ ರೆಸಾರ್ಟ್‌ ಮಾಲೀಕರಿಗೆ ಗ್ರಾ.ಪಂ. ವತಿಯಿಂದ ನೋಟಿಸ್ ಕಳುಹಿಸಲಾಗಿತ್ತು. ಅದನ್ನು ಪಡೆಯದೆ ವಾಪಸ್ ಕಳುಹಿಸಿದ್ದಾರೆ. ಅಧಿಕಾರಿಗಳು ರೆಸಾರ್ಟ್‌ ಮಾಲೀಕರ ಪರ ಮಾತನಾಡುತ್ತಿದ್ದು, ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು’ ಎಂದು ದಿನೇಶ್ ಹೇಳಿದರು.

ಸರ್ಕಾರದ ಲೋಗೊ ಬಳಕೆ: ಆಲ್ಫಾ ವೆಲ್‌ನೆಸ್‌ ರೆಸಾರ್ಟ್‌ ಎಂಬ ಫಲಕದ ಮೇಲ್ಭಾಗದಲ್ಲಿ ‘ಕರ್ನಾಟಕ ಸರ್ಕಾರ’ದ ಲೋಗೊ ಬಳಸಿರುವುದು ಚರ್ಚೆಗೆ ಗ್ರಾಸವಾಗಿದೆ. ‘ವ್ಯಕ್ತಿಯೊಬ್ಬರು ತಮ್ಮ ಖಾಸಗಿ ರೆಸಾರ್ಟ್‌ನ ಫಲಕದಲ್ಲಿ ಕರ್ನಾಟಕ ಸರ್ಕಾರದ ಲೊಗೊ ಬಳಸಲು ಅವಕಾಶ ಇಲ್ಲ. ಸರ್ಕಾರದ ಲೊಗೊವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಸಂಬಂಧಿಸಿವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಪ್ರದೀಪ್‌ ಒತ್ತಾಯಿಸಿದರು.

‘ಮೇಳಾಪುರ ಬಳಿ ವಿತರಣಾ ನಾಲೆಯ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಅತಿಕ್ರಮ ಮಾಡಿಕೊಂಡಿರುವ ವಿಷಯ ಗೊತ್ತಾಗಿದೆ. ನಾಲೆ ಜಾಗದಲ್ಲಿ ನಿರ್ಮಿಸಿರುವ ಗೋಡೆ ತೆರವು ಮಾಡುವಂತೆ ತಿಳಿಸಿದ್ದರೂ ತಡಮಾಡುತ್ತಿದ್ದಾರೆ. ಒಂದೆರಡು ದಿನಗಳಲ್ಲಿ ಗೋಡೆ ತೆರವು ಮಾಡದಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಎಂಜಿನಿಯರ್‌ ಲೋಹಿತ್‌ ಹೇಳಿದ್ದಾರೆ.

‘ಮೇಳಾಪುರ ಬಳಿ ಸರ್ಕಾರಿ ಖರಾಬು ಜಾಗದಲ್ಲಿ ಗೋಡೆ ನಿರ್ಮಿಸಿರುವುದಾಗಿ ರೈತರು ತಿಳಿಸಿದ್ದಾರೆ. ಸ್ಥಳ ಪರಿಶೀಲನೆ ನಡೆಸಿ ಅತಿಕ್ರಮ ತೆರವು ಮಾಡಿಸಲಾಗುವುದು’ ಎಂದು ಕಂದಾಯ ನಿರೀಕ್ಷಕ ಟಿ.ಪಿ. ರೇವಣ್ಣ ತಿಳಿಸಿದ್ದಾರೆ.

‘ಸರ್ಕಾರದ ಸಹಾಯ ಧನ ಪಡೆದು ವೆಲ್‌ನೆಸ್‌ ರೆಸಾರ್ಟ್‌ ನಿರ್ಮಿಸಲಾಗುತ್ತಿದೆ. ಹಾಗಾಗಿ ಸರ್ಕಾರದ ಲೊಗೊ ಬಳಸಿದ್ದೇನೆ’ ಎಂದು ಮಾಲೀಕ ರಿಜ್ವಾನ್‌ ‘ಪ್ರಜಾವಾಣಿಗೆ’ ಪ್ರತಿಕ್ರಿಯಿಸಿದ್ದಾರೆ.

ಶ್ರೀರಂಗಪಟ್ಟಣ ತಾಲ್ಲೂಕಿನ ಮೇಳಾಪುರ ಬಳಿ ನಾಲೆ ಏರಿ ಮತ್ತು ಸರ್ಕಾರಿ ಖರಾಬು ಜಾಗಕ್ಕೆ ಕಬ್ಬಿಣದ ಬೇಲಿ ಹಾಕಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.