ADVERTISEMENT

ಕೆಆರ್‌ಎಸ್‌ಗೆ ಗಣಿ ಧಕ್ಕೆ: ಪರೀಕ್ಷಾರ್ಥ ಸ್ಫೋಟ 25ರಿಂದ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 12:24 IST
Last Updated 22 ಜುಲೈ 2022, 12:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಡ್ಯ: ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ ಜಲಾಶಯದ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಸಿಎಸ್‌ಐಆರ್‌–ಸಿಐಎಂಎಫ್‌ಆರ್‌ (ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ– ಗಣಿ ಮತ್ತು ಇಂಧನ ಸಂಶೋಧನಾ ಕೇಂದ್ರೀಯ ಸಂಸ್ಥೆ) ವಿಜ್ಞಾನಿಗಳ ತಂಡ ಜುಲೈ 25ರಿಂದ 31ರವರೆಗೆ ಜಲಾಶಯದ 20 ಕಿ.ಮೀ ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಸಲಿದೆ.

ಕಲ್ಲು ಗಣಿ ಪ್ರದೇಶದ 5 ಕಡೆಗಳಲ್ಲಿ ಗಣಿ ಇಲಾಖೆ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸ್ಥಳ ಗುರುತು ಮಾಡುವ ಪ್ರಕ್ರಿಯೆ ಆರಂಭಿಸಿದ್ದಾರೆ. ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟ, ಬನ್ನಂಗಾಡಿ, ಶ್ರೀರಂಗಪಟ್ಟಣ ತಾಲ್ಲೂಕಿನ ನೀಲನಕೊಪ್ಪಲು ಮುಂತಾದೆಡೆ ಪೊಲೀಸ್‌ ಭದ್ರತೆಯಲ್ಲಿ ಸ್ಥಳ ಗುರುತಿಸಲಾಗುತ್ತಿದೆ.

20 ಕಿ.ಮೀ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲು ಸ್ಫೋಟದಿಂದಾಗಿ ಕೆಆರ್‌ಎಸ್‌ ಜಲಾಶಯಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ತಜ್ಞರು 2018ರಲ್ಲಿ ವರದಿ ಸಲ್ಲಿಸಿದ್ದರು. ವರದಿ ಆಧಾರದ ಮೇಲೆ, ಪುಣೆಯ ಕೇಂದ್ರ ಜಲ ಮತ್ತು ಶಕ್ತಿ ಸಂಶೋಧನಾ ಕೇಂದ್ರದ (ಸಿಡಬ್ಲ್ಯುಪಿಆರ್‌ಎಸ್‌) ಭೂವಿಜ್ಞಾನಿಗಳ ತಂಡವು 2019ರಲ್ಲಿ ಪರೀಕ್ಷಾರ್ಥ ಸ್ಫೋಟಕ್ಕೆ ಮುಂದಾಗಿತ್ತು.

ADVERTISEMENT

ಆದರೆ, ಸ್ಥಳೀಯ ರೈತ ಮುಖಂಡರು ಪರೀಕ್ಷಾರ್ಥ ಸ್ಫೋಟ ಖಂಡಿಸಿ ಭೂವಿಜ್ಞಾನಿಗಳ ವಿರುದ್ಧ ಗೋಬ್ಯಾಕ್‌ ಚಳವಳಿ ನಡೆಸಿದ್ದರು. ಇದರಿಂದ ಭೂವಿಜ್ಞಾನಿಗಳ ತಂಡ ವಾಪಸ್ಸಾಗಿತ್ತು. ಈಗ ಮತ್ತೆ ಕಾವೇರಿ ನೀರಾವರಿ ನಿಗಮದ ಮನವಿ ಮೇರೆಗೆ, ಸಿಎಸ್‌ಐಆರ್‌–ಸಿಐಎಂಎಫ್‌ಆರ್‌ ತಂಡ ಅಧ್ಯಯನಕ್ಕೆ ಮುಂದಾಗಿದೆ.

‘ಕಲ್ಲು ಗಣಿಗಾರಿಕೆಯಿಂದ ಉಂಟಾಗುತ್ತಿರುವ ಪರಿಣಾಮಗಳ ಅಧ್ಯಯನಕ್ಕಾಗಿ ಪರೀಕ್ಷಾರ್ಥ ಸ್ಫೋಟ ನಡೆಸಲಾಗುತ್ತಿದೆ. ವಿಜ್ಞಾನಿಗಳ ತಂಡ ವರದಿ ನೀಡುವವರೆಗೂ ಕಲ್ಲು ಗಣಿ ಚಟುವಟಿಕೆಯನ್ನು ನಿಷೇಧಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.