ಶ್ರೀರಂಗಪಟ್ಟಣ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರ ಜೀವನ ಮಟ್ಟ ಸುಧಾರಿಸುತ್ತಿದೆ ಎಂದು ತಜ್ಞರ ವರದಿಗಳು ದೃಢಪಡಿಸಿವೆ ಎಂದ ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.
ಕ್ಷೇತ್ರದ ಮಂಗಲ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಜನತಾ ದರ್ಶನದಲ್ಲಿ ಜನರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
‘ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಮತ್ತು ಯುವ ನಿಧಿ ಯೋಜನೆಗಳು ಜನರ ಸಂಕಷ್ಟವನ್ನು ದೂರ ಮಾಡುತ್ತಿವೆ. ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಈ ಯೋಜನೆಗಳು ವರದಾನವಾಗಿವೆ. ಕೃಷಿ ಪಂಪ್‌ಸೆಟ್ ಹೊಂದಲು ಬಯಸುವ ರೈತರು ಸೆಸ್ಕ್ ಕಚೇರಿಗೆ ₹21,500 ಪಾವತಿಸಿದರೆ ಟಿಸಿ ಅಳವಡಿಸಿ ಆರ್‌ಆರ್ ನಂಬರ್ ಕೊಡಲಾಗುತ್ತದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
‘ಕೊತ್ತತ್ತಿ ಹೋಬಳಿಯಲ್ಲಿ 13 ಸಾವಿರ ಪೌತಿ ಖಾತೆಗಳಿದ್ದು, ಮಂಗಲ ಗ್ರಾಮದಲ್ಲಿ 900 ಪೌತಿ ಖಾತೆ ಆಗಬೇಕಿದೆ. ಕಾಲ ಮಿತಿಯಲ್ಲಿ ಖಾತೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಲು ಸರ್ಕಾರ ಕೆಪಿಎಸ್ ಶಾಲೆಗಳನ್ನು ತೆರೆದು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು’ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ನಾಲೆಗಳ ಆಧುನೀಕರಣ, ರಸ್ತೆ ಅಭಿವೃದ್ಧಿ ಸೇರಿದಂತೆ ಸುಮಾರು ₹500 ಕೋಟಿ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ. ಮೇ 20ರಂದು ಕೊತ್ತತ್ತಿ ಹಾಗೂ ಮೇ 27ರಂದು ಸೂನಗಹಳ್ಳಿಯಲ್ಲಿ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹೆಚ್ಚಿನ ಜನರು ಪಾಲ್ಗೊಳ್ಳಬೇಕು’ ಎಂದು ರಮೇಶ ಬಂಡಿಸಿದ್ದೇಗೌಡ ಮನವಿ ಮಾಡಿದರು.
ಉಪ ವಿಭಾಗಾಧಿಕಾರಿ ಶಿವಮೂರ್ತಿ ಮಾತನಾಡಿದರು. ತಹಶೀಲ್ದಾರ್ ಶಿವಕುಮಾರ್ ಬೀರಾದಾರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವೀಣಾ, ಉಪ ತಹಶೀಲ್ದಾರ್ ತಮ್ಮಣ್ಣಗೌಡ, ಗ್ರಾ.ಪಂ. ಅಧ್ಯಕ್ಷ ಮಹೇಶ್, ಉಪಾಧ್ಯಕ್ಷೆ ಬೃಂದಾ, ಎಡಿಎಲ್‌ಆರ್ ಮಮತಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.