
ಮಂಡ್ಯ: ‘ಪ್ರಜಾಪ್ರಭುತ್ವದ ಹೃದಯ ಭಾರತೀಯ ಸಂವಿಧಾನ ಆಗಿದ್ದು, ಸಂವಿಧಾನವನ್ನು ರಕ್ಷಣೆ ಮಾಡಬೇಕಾದದ್ದು ಭಾರತೀಯರ ಹೊಣೆಗಾರಿಕೆ’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ನ.26 ಭಾರತೀಯರಿಗೆ ಪತ್ರವಾದ ಪುಣ್ಯ ದಿನ. ವಿವಿಧ ಧರ್ಮಗಳ ಪವಿತ್ರ ಗ್ರಂಥಗಳ ತರಹವೇ ಭಾರತೀಯ ಸಂವಿಧಾನವು ಮಾನವೀಯತೆಯ ಪವಿತ್ರ ಗ್ರಂಥ’ ಎಂದು ಹೇಳಿದರು.
‘ಪಿ.ಇ.ಎಸ್ ಕಾನೂನು ಕಾಲೇಜಿನ ಪ್ರಾಧ್ಯಾಪಕ ಸುಭಾಷ್ ಎನ್.ಸಿ. ಮಾತನಾಡಿ, 1949ರ ನವೆಂಬರ್ 26ರಂದು ಸಂವಿಧಾನವನ್ನು ಜಾರಿಗೆ ತರಲಾಯಿತು. 1950 ಜನವರಿ 26ರಂದು ಭಾರತೀಯ ಸಂವಿಧಾನವನ್ನು ಅಂಗೀಕರಿಸಲಾಯಿತು. ಭಾರತೀಯ ಸಂವಿಧಾನ ಸರ್ಕಾರವನ್ನು ಹೇಗೆ ರಚಿಸಬೇಕು. ಸಮಾಜದ ಕರ್ತವ್ಯಗಳು ಏನು ಎಂಬುದನ್ನು ತಿಳಿಸುತ್ತದೆ’ ಎಂದರು.
ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಸಂವಿಧಾನ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಚಲುವಯ್ಯ, ಸಹಾಯಕ ನಿರ್ದೇಶಕಿ ಕಾವ್ಯಾ, ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಡಾ.ಬಾಬು ಜಗಜೀವನರಾಂ ಒಕ್ಕೂಟದ ಅಧ್ಯಕ್ಷ ಎನ್.ಆರ್. ಚಂದ್ರಶೇಖರ್, ಮುಖಂಡರಾದ ಅಮ್ಜದ್ ಪಾಷಾ, ಕೃಷ್ಣ, ಶ್ರೀಧರ್ ಇದ್ದರು.
‘ಸಂವಿಧಾನದ ಆಶಯ ಪಾಲಿಸಿ’
ಮಂಡ್ಯ: ಸಂವಿಧಾನ ದಿನವನ್ನು ಹಾಗೂ ಸಂವಿಧಾನದ ಆಶಯಗಳನ್ನು ಕೇವಲ ಒಂದು ದಿನಕ್ಕೆ ಸೀಮಿತ ಮಾಡದೇ ಪ್ರತಿದಿನ ಸಂವಿಧಾನದ ಆಶಯಗಳನ್ನು ಪಾಲಿಸುವುದು ನಮ್ಮ ಜವಾಬ್ದಾರಿ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್. ಹೇಳಿದರು. ಮಂಡ್ಯದಲ್ಲಿ ಮಹಿಳಾ ಸರ್ಕಾರಿ ಕಾಲೇಜು ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ಸಂವಿಧಾನ ದಿನ ಕಾರ್ಯಕ್ರಮ ಮಂಡ್ಯ ನಗರದ ಸರ್ಕಾರಿ ಮಹಿಳಾ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕರ್ನಾಟಕದ ನಾಲ್ವರು ಸದಸ್ಯರು ಸಂವಿಧಾನ ರಚನಾ ಸಮಿತಿಯಲ್ಲಿ ಇದ್ದರು. ಕಾನೂನಿನ ಮುಂದೆ ಎಲ್ಲರೂ ಸಮಾನರು ಭಾರತೀಯ ಸಂವಿಧಾನಕ್ಕೆ ತನ್ನದೇ ಆದ ವಿಶಿಷ್ಟ ಗೌರವ ಇದೆ ಎಂದರು. ಹಿರಿಯ ಸಿವಿಲ್ ನ್ಯಾಯಧೀಶ ಎಂ. ಆನಂದ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷರಾದ ಟಿ.ಎಸ್. ಸತ್ಯಾನಂದ ಮಾತನಾಡಿದರು. ಪರಿಸರ ರೂರಲ್ ಡೆವೆಲಪ್ ಮೆಂಟ್ ಸೊಸೈಟಿಯ ಅಧ್ಯಕ್ಷರಾದ ಮಂಗಲ ಎಂ. ಯೋಗೀಶ್ ಅವರು ಎಲ್ಲರಿಗೂ ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಪ್ರಾಶುಪಾಲ ಪ್ರೊ.ಗುರುರಾಜ್ ಪ್ರಭು ಕೆ ಪ್ರಾಧ್ಯಾಪಕ ದಾಸೇಗೌಡ ಕಾರ್ಮಿಕ ಇಲಾಖೆಯ ಸ್ವಾಮಿ ಪಾಲ್ಗೊಂಡಿದ್ದರು.
ಭಾವಚಿತ್ರದ ಅದ್ದೂರಿ ಮೆರವಣಿಗೆ
ಜಿಲ್ಲಾಧಿಕಾರಿ ಕಚೇರಿಯಿಂದ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದವರೆಗೆ ಅದ್ದೂರಿ ಮೆರವಣಿಗೆ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಕುಮಾರ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್. ನಂದಿನಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ವರ್ಣರಂಜಿತ ಬೆಳ್ಳಿರಥದ ಮೇಲೆ ಇರಿಸಲಾಗಿದ್ದ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮೆರವಣಿಗೆಯಲ್ಲಿ ಪೂರ್ಣ ಕುಂಭ ಹೊತ್ತು ಮಹಿಳೆಯರು ಡೊಳ್ಳು ಕುಣಿತ ವಿದ್ಯಾರ್ಥಿಗಳು ಸಂವಿಧಾನದ ಕುರಿತಾಗಿ ನಾಮಫಲಕಗಳನ್ನು ಪ್ರದರ್ಶಿಸುವ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಯಿತು.
ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ
ಮಂಡ್ಯ: ನಾಗರಿಕರಲ್ಲಿ ಸಾಂವಿಧಾನಿಕ ಮೌಲ್ಯಗಳಿಗೆ ಗೌರವ ಹಾಗೂ ಜಾಗೃತಿ ಹೆಚ್ಚಿಸುವ ಉದ್ದೇಶದಿಂದ ‘ಸಂವಿಧಾನ ದಿನ’ ಆಚರಿಸಲಾಗುತ್ತಿದೆ ಎಂದು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್ ಹೇಳಿದರು. ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕಾವೇರಿ ಉದ್ಯಾನವನದಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ 76ನೇ ವರ್ಷದ ಸಂವಿಧಾನ ದಿನ ಪ್ರಯುಕ್ತ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಕಾವ್ಯಾ ನಗರಸಭಾ ಮಾಜಿ ಸದಸ್ಯ ಶ್ರೀಧರ್ ವಿಶ್ವ ದಲಿತ ಮಹಾಸಭಾ ಸಂಸ್ಥಾಪಕ ಅಧ್ಯಕ್ಷ ಪೂರ್ಣಚಂದ್ರ ಕರ್ನಾಟಕ ಸಂವಿಧಾನ ಸೇನೆ ರಾಜ್ಯ ಘಟಕದ ಅಧ್ಯಕ್ಷ ನರಸಿಂಹಮೂರ್ತಿ ದಸಂಸ ಹೋರಾಟಗಾರ ತುಳಸೀಧರ್ ಎಂ.ವಿ.ಕೃಷ್ಣ ಆಟೊಕೃಷ್ಣ ಗುರುಶಂಕರ್ ವಿಜಯ್‌ಕುಮಾರ್ ದೀಪಕ್ ಮಹದೇವ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.