ADVERTISEMENT

ಮಂಡ್ಯ | ಶಿಶು ಮರಣ ತಡೆಗಟ್ಟಲು ಕ್ರಮವಹಿಸಿ: ಜಿಲ್ಲಾ ಪಂಚಾಯಿತಿ ಸಿಇಒ ನಂದಿನಿ

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಸಭೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 3:09 IST
Last Updated 5 ಆಗಸ್ಟ್ 2025, 3:09 IST
<div class="paragraphs"><p>ಮಂಡ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಆವರಣದ ಜೆ.ಎಲ್. ಜವರೇಗೌಡ ಸಭಾಂಗಣದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಇಒ ನಂದಿನಿ ಮಾತನಾಡಿದರು. </p></div>

ಮಂಡ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಆವರಣದ ಜೆ.ಎಲ್. ಜವರೇಗೌಡ ಸಭಾಂಗಣದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಇಒ ನಂದಿನಿ ಮಾತನಾಡಿದರು.

   

ಮಂಡ್ಯ: ‘ಪ್ರತಿಯೊಂದು ಶಿಶುವಿಗೂ ಬದುಕುವ ಹಕ್ಕಿದ್ದು, ಜಿಲ್ಲೆಯಲ್ಲಿ ಯಾವುದೇ ಶಿಶು ಮರಣ ಆಗದಂತೆ ತಡೆಗಟ್ಟುವ ಜವಾಬ್ದಾರಿ ಆರೋಗ್ಯ ಇಲಾಖೆಯದ್ದಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ನಂದಿನಿ ಕೆ.ಆರ್. ಅಭಿಪ್ರಾಯಪಟ್ಟರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಆವರಣದಲ್ಲಿನ ಜೆ.ಎಲ್. ಜವರೇಗೌಡ ಸಭಾಂಗಣದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ADVERTISEMENT

ಶಿಶು ಮರಣಗಳು ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಿದರು.

ಗರ್ಭಾವಸ್ಥೆಯಿಂದಲೇ ಗುಣಮಟ್ಟದ ಆರೋಗ್ಯ ಸೇವೆ, ಸುರಕ್ಷಿತ ಹೆರಿಗೆಗೆ ಆದ್ಯತೆ, ಶಿಶು ಆರೈಕೆ ಮತ್ತು ತುರ್ತು ಚಿಕಿತ್ಸೆಯ ಲಭ್ಯತೆ, ಮೊದಲ 6 ತಿಂಗಳು ತಾಯಿ ಹಾಲನ್ನು ಮಾತ್ರ ನೀಡುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು, ಪೋಷಕಾಂಶಯುಕ್ತ ಆಹಾರ ಸೇವನೆ, ಲಸಿಕಾಕರಣ ಹಾಗೂ ಪೋಷಕರಿಗೆ ಶಿಶು ಆರೋಗ್ಯದ ಕುರಿತು ಜಾಗೃತಿ ನೀಡುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹೆಣ್ಣುಮಕ್ಕಳಿಗೆ ‘ಮುಟ್ಟಿನ ಕಪ್’ ವಿತರಿಸಲಾಗುತ್ತಿದ್ದು, ಸದರಿ ಮುಟ್ಟಿನ ಕಪ್ ಬಳಕೆಯ ಬಗ್ಗೆ ಅನುಸರಣೆಯ ಜವಾಬ್ದಾರಿಯನ್ನು ಆಶಾ ಕಾರ್ಯಕರ್ತೆಯರು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಆಶಾ ಕಾರ್ಯಕರ್ತೆಯರು ಕಡ್ಡಾಯವಾಗಿ ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮಾ ಯೋಜನೆಯಡಿ ನೋಂದಣಿ ಮಾಡಿಕೊಳ್ಳಬೇಕು ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್, ಆರ್.ಸಿ.ಎಚ್. ಅಧಿಕಾರಿ ಡಾ.ಅಶ್ವತ್ಥ್‌, ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮಾಧಿಕಾರಿ ಡಾ.ಆಶಾಲತಾ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಸೋಮಶೇಖರ್, ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ.ಕುಮಾರ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕಾಂತರಾಜು ಮತ್ತು ತಾಲ್ಲೂಕು ವೈದ್ಯಾಧಿಕಾರಿ ಇದ್ದರು. 

'ಎದೆ ಹಾಲಿನ ಬ್ಯಾಂಕಿಗೆ ಕ್ರಮವಹಿಸಿ’:

ತಾಯಿ ಹಾಲು ಕೊರತೆಯುಳ್ಳ ಮಕ್ಕಳಿಗೆ ಬೇರೆ ತಾಯಂದಿರಿಂದ ಸುರಕ್ಷಿತವಾಗಿ ಸಂಗ್ರಹಿಸಲ್ಪಟ್ಟ ಹಾಲನ್ನು ನೀಡುವುದರಿಂದ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದ್ದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಮಾದರಿಯಲ್ಲಿ ಎದೆ ಹಾಲಿನ ಬ್ಯಾಂಕ್ ತೆರೆಯಬಹುದಾಗಿದೆ. ಈ ಕುರಿತು ಡಿಎಚ್‌ಒ ನೇತೃತ್ವದ ತಂಡ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಅಧ್ಯಯನ ನಡೆಸಿ ಪ್ರಸ್ತಾವ ಸಲ್ಲಿಸಲು ಸಿಇಒ ಕೆ.ಆರ್‌.ನಂದಿನಿ ಸೂಚಿಸಿದರು. ಶಿಶು ಮತ್ತು ತಾಯಿ ಇಬ್ಬರಿಗೂ ಗಂಭೀರ ತೊಂದರೆಗಳು ಉಂಟಾಗುವ ಸಂಭವವಿರುವ ಗರ್ಭಧಾರಣೆ ಮತ್ತು ಕಡಿಮೆ ತೊಂದರೆ ಇರುವ ಗರ್ಭಧಾರಣೆಗಳನ್ನು ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡುವಂತೆ ಹಾಗೂ ಯಾವುದೇ ಜೀವ ಹಾನಿಯಾಗದಂತೆ ಎಚ್ಚರಿಕೆ ವಹಿಸುವುದು ಸುಲಭ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.