
ಸಂತೇಬಾಚಹಳ್ಳಿ: ಇಲ್ಲಿನ ಮಾರುಕಟ್ಟೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಕುಡಿಯುವ ನೀರು ಹಾಗೂ ವಿದ್ಯುತ್ ಮೂಲಸೌಕರ್ಯ ಒದಗಿಸಿದ್ದಾರೆ.
ಜುಲೈ 20ರಂದು ‘ಪ್ರಜಾವಾಣಿ’ ವಿಶೇಷ ಸಂಚಿಕೆಯಲ್ಲಿ ‘ಮಾರುಕಟ್ಟೆಗಿಲ್ಲ ಮೂಲಸೌಕರ್ಯ’ ಶೀರ್ಷಿಕೆಯಲ್ಲಿ ಇಲ್ಲಿನ ಸಮಸ್ಯೆಗಳ ಬಗ್ಗೆ ಸುದ್ದಿ ಬಿತ್ತರಿಸಲಾಗಿತ್ತು. ಹೋಬಳಿಯ ಮಾರುಕಟ್ಟೆಗೆ ಮೂಲಸೌಕರ್ಯ ಇಲ್ಲದೆ ಇರುವುದು ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಶಾಸಕ ಎಚ್.ಟಿ ಮಂಜು ಅವರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸುವಂತೆ ಎಚ್ಚರಿಕೆ ನೀಡಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಕರ್ತವ್ಯಾಧಿಕಾರಿ ಕೆ.ವೈಷ್ಣವಿ ಅವರು ‘ಪ್ರಜಾವಾಣಿ’ ವರದಿ ಉಲ್ಲೇಖಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೃಷಿ ಹಾಗೂ ಮಾರುಕಟ್ಟೆ ಸಹಕಾರ ಇಲಾಖೆಗೆ ಪತ್ರ ಬರೆದಿದ್ದರು.
ಕೂಡಲೇ ಎಚ್ಚೆತ್ತುಕೊಂಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸತೀಶ್ ಹಾಗೂ ಪಿಡಿಓ ನೂತನ್, ಗ್ರಾಮಪಂಚಾಯಿತಿ ಸದಸ್ಯ ಬಿ.ಮೋಹನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಇಬಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ಮಾರುಕಟ್ಟೆ ಆವರಣ ಸ್ವಚ್ಛಗೊಳಿಸಿದರು. ನೀರಿನ ತೊಂಬೆಗಳಿಂದ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಬೆಳಗಿನ ಜಾವ ವ್ಯಾಪಾರಕ್ಕಾಗಿ ರೈತರಿಗೆ ವಿದ್ಯುತ್ ಲೈಟ್ ಗಳನ್ನು ಅಳವಡಿಕೆ ಮಾಡಿದರು. ರಸ್ತೆ ಆಸನ ವ್ಯವಸ್ಥೆ ಸೇರಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದಾರೆ.
‘ಗ್ರಾಮಪಂಚಾಯಿತಿಯಿಂದ ಕುಡಿಯುವ ನೀರು, ವಿದ್ಯುತ್ ಸೇರಿ ಮೂಲಸೌಕರ್ಯ ನೀಡಲಾಗಿದೆ. ರೈತರಿಗೆ ಅನುಕೂಲ ಮಾಡುವುದು ನಮ್ಮ ಕರ್ತವ್ಯ’ ಎಂದು ಬಿ.ಮೋಹನ್ ತಿಳಿಸಿದರು.
‘ಪ್ರಜಾವಾಣಿ’ ವರದಿ ಆಧರಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಕಚೇರಿಯಿಂದ ಪತ್ರ ಬಂದಿತ್ತು. ರೈತರಿಗೆ ತೊಂದರೆಯಾಗದಂತೆ ಎಲ್ಲಾ ಇಲಾಖೆಯ ಸಹಕಾರದೊಂದಿಗೆ ಮೂಲಸೌಕರ್ಯ ನೀಡಲಾಗಿದೆ’ ಎಂದು ಸಮಿತಿ ಕಾರ್ಯದರ್ಶಿ ಸತೀಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.