ADVERTISEMENT

ಅಮಾನವೀಯ ಘಟನೆ; ಎಚ್ಚರ ಅಗತ್ಯ- ಜಿಲ್ಲಾಧಿಕಾರಿ ಸೂಚನೆ

ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 16:18 IST
Last Updated 8 ಏಪ್ರಿಲ್ 2022, 16:18 IST
ಮಂಡ್ಯ ಜಿಲ್ಲಾ ಪಂಚಾಯಿತಿಯಲ್ಲಿ ಆಯೋಜಿಸಿದ್ದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್‌.ಅಶ್ವತಿ ಮಾತನಾಡಿದರು. ದಿವ್ಯಾಪ್ರಭು, ವೇಣುಗೋಪಾಲ್‌, ಬಿ.ಸಿ.ಶಿವಾನಂದಮೂರ್ತಿ, ಐಶ್ವರ್ಯಾ ಇದ್ದಾರೆ
ಮಂಡ್ಯ ಜಿಲ್ಲಾ ಪಂಚಾಯಿತಿಯಲ್ಲಿ ಆಯೋಜಿಸಿದ್ದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್‌.ಅಶ್ವತಿ ಮಾತನಾಡಿದರು. ದಿವ್ಯಾಪ್ರಭು, ವೇಣುಗೋಪಾಲ್‌, ಬಿ.ಸಿ.ಶಿವಾನಂದಮೂರ್ತಿ, ಐಶ್ವರ್ಯಾ ಇದ್ದಾರೆ   

ಮಂಡ್ಯ:ಪರಿಶಿಷ್ಟ ಜನಾಂಗದವರಿಗೆ ಕ್ಷೌರಮಾಡಲು ನಿರಾಕರಿಸುವ ಪ್ರಕರಣಗಳು ಸೇರಿದಂತೆ ದೌರ್ಜನ್ಯ ಹಾಗೂ ಅಮಾನವೀಯ ಘಟನೆಗಳು ಜಿಲ್ಲೆಯಲ್ಲಿ ನಡೆಯದಂತೆ ಸಂಬಂಧಪಟ್ಟ ಅಧಿಕಾರಿಗಳು ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವತಿ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ಪ್ರತಿಬಂಧ)ಕಾಯ್ದೆ-1989 ಹಾಗೂ ನಿಯಮಗಳನ್ನು ಅನುಷ್ಠಾನಗೊಳಿಸುವ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಲು ಅಧಿಕಾರಿಗಳು ಕ್ರಮವಹಿಸಬೇಕು. ದೌರ್ಜನ್ಯಕ್ಕೆ ಒಳಗಾಗಿ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರುಗಳನ್ನು ಸ್ವೀಕರಿಸಿ, ಎಫ್.ಐ.ಆರ್. ದಾಖಲಿಸಬೇಕು ಎಂದು ತಿಳಿಸಿದರು.

ADVERTISEMENT

ಪರಿಶಿಷ್ಟ ಜನಾಂಗದವರಿಗೆ ಕ್ಷೌರಮಾಡಲು ನಿರಾಕರಿಸುವ ಪ್ರಕರಣಗಳು, ಪರಿಶಿಷ್ಟ ಜಾತಿಯವರಿಗೆ ಕುಡಿಯುವ ನೀರು ಹಾಗೂ ಇನ್ನಿತರ ವಿಷಯದಲ್ಲಿ ತಾರತಮ್ಯ ಮಾಡದ ರೀತಿಯಲ್ಲಿ ಜಾಗೃತಿಯ ಕಾರ್ಯಾಗಾರ ನಡೆಸಬೇಕು.ಜಿಲ್ಲೆಯಲ್ಲಿನ ದುದ್ದ, ದೇವಲಾಪುರದಲ್ಲಿ ವಸತಿ ಶಾಲೆಗಳಿಗೆ ಜಾಗ ಹಾಗೂ ಮೂಲ ಸೌಲಭ್ಯ ಕಲ್ಪಿಸಿ ಕೊಡುವ ಕುರಿತು ಹಾಗೂ ಕೊಮ್ಮರಹಳ್ಳಿಯ ಸಾರ್ವಜನಿಕ ಸ್ಮಶಾನಕ್ಕೆ ಹೋಗುವ ರಸ್ತೆ ಕಲ್ಪಿಸಸುವ ಸಂಬಂಧ ಚರ್ಚೆ ನಡೆಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲೆಯ ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಉಪ ವಿಭಾಗ ಮಟ್ಟದಲ್ಲಿ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಸಿ ಕುಂದು ಕೊರತೆ ಆಲಿಸಿ ಬಗೆಹರಿಸಬೇಕು.ಡಾ.ಬಾಬು ಜಗಜೀನರಾಂ ಭವನ ಹಾಗೂ ಬುದ್ಧ ವಿಹಾರ ಕೇಂದ್ರವನ್ನು ನಿರ್ಮಾಣ ಮಾಡಲು ಜಿಲ್ಲಾ ಕೇಂದ್ರ ಹಾಗೂ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ನಿವೇಶನ ಹುಡುಕಿ ಪ್ರಸ್ತಾವನೆ ಸಲ್ಲಿಸಬೇಕು ಎಂದರು.

ಜಿ.ಪಂ. ಸಿಇಒ ಜಿ.ಆರ್.ಜೆ.ದಿವ್ಯಾಪ್ರಭು, ಉಪ ವಿಭಾಗಾಧಿಕಾರಿಗಳಾದ ಐಶ್ವರ್ಯಾ, ಬಿ.ಸಿ.ಶಿವಾನಂದಮೂರ್ತಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೇಣು ಗೋಪಾಲ್,ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಿ.ರಂಗೇಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.