ADVERTISEMENT

ಮೇಳೈಸಿದ ಕೀಟ ಪ್ರಪಂಚದ ವಿಸ್ಮಯ

500 ಕೀಟಗಳ ಕಲಾಕೃತಿಗಳು, ಆಕರ್ಷಕ ಶೀರ್ಷಿಕೆಗಳು

ಸಿದ್ದು ಆರ್.ಜಿ.ಹಳ್ಳಿ
Published 7 ಡಿಸೆಂಬರ್ 2025, 3:24 IST
Last Updated 7 ಡಿಸೆಂಬರ್ 2025, 3:24 IST
ಕೃಷಿ ಮೇಳದಲ್ಲಿ ಶನಿವಾರ ‘ವಿಸ್ಮಯ ಕೀಟ ಪ್ರಪಂಚ’ವನ್ನು ವೀಕ್ಷಿಸಿದ ಮಹಿಳೆಯರು 
ಕೃಷಿ ಮೇಳದಲ್ಲಿ ಶನಿವಾರ ‘ವಿಸ್ಮಯ ಕೀಟ ಪ್ರಪಂಚ’ವನ್ನು ವೀಕ್ಷಿಸಿದ ಮಹಿಳೆಯರು    

ಮಂಡ್ಯ: ಕೃಷಿ ಮೇಳದಲ್ಲಿ ಒಂದೇ ಸೂರಿನಡಿ 20 ಸಾವಿರಕ್ಕೂ ಹೆಚ್ಚಿನ ಕೀಟಗಳ ಲೋಕದ ವಿಸ್ಮಯವನ್ನು ತೆರೆದಿಡಲಾಗಿತ್ತು. ಕೀಟಗಳಿಂದಲೇ ತಯಾರಾದ ಕಲಾಕೃತಿಗಳು ನೋಡಗರನ್ನು ಬೆರಗುಗೊಳಿಸಿದವು. 

ಮಂಡ್ಯ ಕೃಷಿ ವಿವಿಯ ಕೀಟಶಾಸ್ತ್ರ ವಿಭಾಗದಿಂದ ಪೋಸ್ಟರ್‌, ಚಾರ್ಟ್‌ಗಳ ಮೂಲಕ ಕೀಟ ಲೋಕದ ಕುತೂಹಲಕಾರಿ ಅಂಶಗಳನ್ನು ಎಳೆ ಎಳೆಯಲಾಗಿ ಪ್ರದರ್ಶಿಸಲಾಗಿತ್ತು. ರೈತಸ್ನೇಹಿ ಕೀಟಗಳಾದ ಜೇನುಹುಳು, ಪತಂಗ, ರೇಷ್ಮೆ ಹುಳು ಹಾಗೂ ಬೆಳೆಗಳಿಗೆ ಹಾನಿ ಉಂಟು ಮಾಡುವ ಕೀಟ ಪ್ರಭೇದಗಳನ್ನು ಅನಾವರಣಗೊಳಿಸಲಾಗಿತ್ತು. 

ಭತ್ತ, ರಾಗಿ, ಕಬ್ಬು, ಜೋಳ, ದ್ವಿದಳ ಧಾನ್ಯಗಳಿಗೆ ಮಾರಕವಾದ ಕಾಂಡಕೊರಕ, ಕೆಂಪು ತಲೆ ಕಂಬಳಿ ಹುಳು, ಬಿಹಾರದ ಕಂಬಳಿ ಹುಳು, ಕೊಂಡಲಿ ಹುಳು, ಚುಕ್ಕೆ ಕಾಯಿಕೊರಕ, ಸ್ಪೊಡಾಪ್ಟೆರಾ, ಬುರುಬುರು ದುಂಬಿ, ಬೇಳೆಕಾಳು ಕುಂಟೆ ದುಂಬಿ ಮುಂತಾದ ಕೀಟಗಳ ಜೀವನಚಕ್ರವನ್ನು ಪರಿಚಯ ಮಾಡಲಾಗಿತ್ತು. ಜೊತೆಗೆ ಇವುಗಳನ್ನು ನಿಯಂತ್ರಿಸುವ ಬಗೆಯನ್ನು ಅಲ್ಲಿನ ಕೃಷಿ ವಿಜ್ಞಾನಿ ಮತ್ತು ವಿದ್ಯಾರ್ಥಿಗಳು ಜನರಿಗೆ ತಿಳಿಸುತ್ತಿದ್ದರು. 

ADVERTISEMENT

ಮನುಷ್ಯರಿಗೆ ಮತ್ತು ಬೆಳೆಗಳಿಗೆ ರೋಗ ಹರಡುವ ಎರಡು ಪ್ರಭೇದಗಳನ್ನೂ ಅಲ್ಲಿ ಪರಿಚಯಿಸಲಾಗಿತ್ತು. 37 ವರ್ಷ ಬದುಕುವ ಜೀರುಂಡೆ ಮಾದರಿ ಜನರ ಗಮನಸೆಳೆಯಿತು. 

ಆಕರ್ಷಕ ಶೀರ್ಷಿಕೆಗಳು:

500ಕ್ಕೂ ಹೆಚ್ಚು ಕೀಟಗಳಿಂದ ಅರಳಿದ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಬೇಸಿಗೆಯಲ್ಲಿ ನಮ್ಮ ಗೀತೆಯದ್ದೇ ಹವಾ (ಜೀರುಂಡೆ), ರಾಮನಿಂದ ರಾವಣನ ಸಂಹಾರ (ಕಡಜ), ನಾವು ಹಾರುವೆವು ದಶ ದಿಕ್ಕುಗಳಲ್ಲಿ (ಪತಂಗ), ನಾವು ಕೂಡ ಹಾಡಬಲ್ಲೆವು (ಜೀರುಂಡೆ), ನನ್ನ ಬಾಲಕ್ಕೆ ಜೂಜು ಕಟ್ಟಿ ಬಡವರಾಗಬೇಡಿ, ‘ನಾನು ಹಿಟ್ಲರ್‌ ರೀತಿ ಕಾಣುತ್ತಿಲ್ಲವೇ? ಮುಂತಾದ ಶೀರ್ಷಿಕೆಗಳು ಎಲ್ಲರ ಗಮನಸೆಳೆದವು. 

ಕೀಟ ಪ್ರಪಂಚದ ನೋಟ 
ಪತಂಗಗಳ ರೆಕ್ಕೆಯಲ್ಲಿ ಅರಳಿದ ‘ರಾಷ್ಟ್ರೀಯ ಪ್ರಾಣಿ ಹುಲಿ’

2 ತಿಂಗಳ ಪರಿಶ್ರಮ ಸಾರ್ಥಕ್ಯ’

‘ಎರಡು ತಿಂಗಳಿಂದ ನಮ್ಮ ವಿದ್ಯಾರ್ಥಿಗಳು ಕಷ್ಟಪಟ್ಟು ಕೀಟಗಳ ಕಲಾಕೃತಿಗಳನ್ನು ತಯಾರು ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಕೃಷಿ ಮೇಳದಲ್ಲಿ ಅನಾವರಣಗೊಂಡ ಕೀಟ ಪ್ರಪಂಚಕ್ಕೆ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದು ಕೃಷಿ ವಿವಿಯ ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥ ಎಲ್‌.ವಿಜಯಕುಮಾರ್‌ ಅನಿಸಿಕೆ ವ್ಯಕ್ತಪಡಿಸಿದರು.   ರೈತರಿಗೆ ಮತ್ತು ಶಾಲಾ ಮಕ್ಕಳಿಗೆ ಇರುವ ಭಯವನ್ನು ನಿವಾರಿಸಲು ಹಾಗೂ ರೈತರಿಗೆ ಅನುಕೂಲ ಮಾಡಿಕೊಡುವ ಪರಭಕ್ಷಕ ಕೀಟಗಳ ಪರತಂತ್ರ ಜೀವಿಗಳು ಪರಾಗಸ್ಪರ್ಶಿಗಳು ಉತ್ಪಾದಕ ಕೀಟಗಳು ಮಣ್ಣಿನ ಫಲವತ್ತತೆ ಹೆಚ್ಚಿಸುವ ಕೀಟಗಳು ಸಾಮಾಜಿಕ ಕೀಟಗಳು ಬೆಳೆಗಳಲ್ಲಿ ರೋಗಗಳನ್ನು ಹರಡುವ ಕೀಟಗಳು ಮತ್ತು ಮನುಷ್ಯನಲ್ಲಿ ಸಾಂಕ್ರಾಮಿಕ ರೋಗವನ್ನು ಹರಡುವ ಕೀಟಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ ಎಂದು ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.