ADVERTISEMENT

ನದಿಗೆ ಕೊಳಚೆ ನೀರು ಸೇರ್ಪಡೆ: ಇಂಟೆಕ್ ವೆಲ್‌ ಬದಲಿಸಲು ಶಾಸಕ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 8:31 IST
Last Updated 14 ಡಿಸೆಂಬರ್ 2025, 8:31 IST
ಶ್ರೀರಂಗಪಟ್ಟಣಕ್ಕೆ ಕಾವೇರಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ, ಚಂದಗಾಲು ರಸ್ತೆಯಲ್ಲಿರುವ ನೀರೆತ್ತುವ ಘಟಕದ ಸ್ಥಳಕ್ಕೆ ಶಾಸಕ ರಮೇಶ ಬಂಡಿಸಿದ್ದೇಗೌಡ ಶನಿವಾರ ಕರ್ನಾಟಕ ನಗರ ನೀರು ಸರಬರಾಜು ಮಂಡಲಿ ಅಧಿಕಾರಿಗಳ ಜತೆ ಭೇಟಿ ನೀಡಿದ್ದರು
ಶ್ರೀರಂಗಪಟ್ಟಣಕ್ಕೆ ಕಾವೇರಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ, ಚಂದಗಾಲು ರಸ್ತೆಯಲ್ಲಿರುವ ನೀರೆತ್ತುವ ಘಟಕದ ಸ್ಥಳಕ್ಕೆ ಶಾಸಕ ರಮೇಶ ಬಂಡಿಸಿದ್ದೇಗೌಡ ಶನಿವಾರ ಕರ್ನಾಟಕ ನಗರ ನೀರು ಸರಬರಾಜು ಮಂಡಲಿ ಅಧಿಕಾರಿಗಳ ಜತೆ ಭೇಟಿ ನೀಡಿದ್ದರು   

ಶ್ರೀರಂಗಪಟ್ಟಣ: ‘ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ, ಚಂದಗಾಲು ರಸ್ತೆಯಲ್ಲಿರುವ ನೀರೆತ್ತುವ ಘಟಕದ ಬಳಿ ಕಾವೇರಿ ನದಿಗೆ ಮೈಸೂರಿನ ಕೊಳಚೆ ನೀರು ಸೇರುತ್ತಿದೆ. ಹಾಗಾಗಿ ಇಂಟೆಕ್ ವೆಲ್ ಅನ್ನು ಉದ್ದೇಶಿತ ಸ್ಥಳದಿಂದ 200 ಮೀಟರ್‌ ಹಿಂದಕ್ಕೆ ನಿರ್ಮಿಸಿ ಶುದ್ಧ ನೀರು ಸರಬರಾಜು ಮಾಡಬೇಕು’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.

ಅಧಿಕಾರಗಳ ಜತೆ ಶನಿವಾರ ಸ್ಥಳ ಪರಿಶೀಲನೆ ನಡೆಸಿದ ಅವರು, ‘ಮೈಸೂರು ಭಾಗದಿಂದ ಹರಿದು ಬರುವ ಕೊಳಚೆ ನೀರು ನೇರವಾಗಿ ಕಾವೇರಿ ನದಿಗೆ ಸೇರುತ್ತಿದೆ. ಕೊಳಚೆ ನೀರು ಸೇರುವ ಸ್ಥಳದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಇಂಟೆಕ್ ವೆಲ್ ನಿರ್ಮಿಸಕೂಡದು. ಜನರಿಗೆ ಶುದ್ಧ ನೀರು ಕೊಡುವುದು ಆದ್ಯತೆಯಾಗಿದ್ದು, ಶುದ್ಧ ನೀರು ಲಭ್ಯ ಇರುವ ಸ್ಥಳದಲ್ಲಿ ಇಂಟೆಕ್‌ ವೆಲ್‌ ನಿರ್ಮಿಸಬೇಕು. ಇನ್ನು ಒಂದೆರಡು ದಿನಗಳಲ್ಲಿ ಕಾಮಗಾರಿ ಆರಂಭಿಸಬೇಕು’ ಎಂದು ಅವರು ತಿಳಿಸಿದರು.

ಪಟ್ಟಣದ ಬತೇರಿ ಬಳಿ ನಿರ್ಮಿಸುತ್ತಿರುವ 7.5 ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಿಸುತ್ತಿರುವ ಸ್ಥಳಕ್ಕೂ ಭೇಟಿ ನೀಡಿ ಅವರು, ಕಾಮಗಾರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ‘ಮಹತ್ವದ 24/ 7 ನೀರು ಸರಬರಾಜು ಯೋಜನೆಯನ್ನು ಸಕಾಲದಲ್ಲಿ ಪೂರ್ಣಗೊಳಿಸಬೇಕು’ ಎಂದು ಹೇಳಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಲ್‌. ದಿನೇಶ್, ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಕಾರ್ಯಪಾಲಕ ಎಂಜಿನಿಯರ್‌ ಬಾಬುಸಾಬ್ ನದಾಫ್, ಪುರಸಭೆ ಎಂಜಿನಿಯರ್‌ ಮುರಳಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.