ಶ್ರೀರಂಗಪಟ್ಟಣ: ಹಿಂದೂ ಧರ್ಮದ ಯುವಕ ಹಾಗೂ ಮುಸ್ಲಿಂ ಮಹಿಳೆ ಪ್ರೇಮ ವಿವಾಹಕ್ಕೆ ಮನೆಯವರ ವಿರೋಧದಿಂದ ಹೊರಬಂದಿದ್ದ ಜೋಡಿಗೆ ಮನೆ ಇಲ್ಲದೇ ಅನಾಥವಾಗಿದ್ದು, ಪಟ್ಟಣದ ಪಾಳು ಮಂಟಪವೊಂದರಲ್ಲಿ ತಂಗಿದ್ದ ವೇಳೆ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಬಳ್ಳಾರಿ ನಗರದ ಇಂದಿರಾ ನಗರದ ಮಹೇಂದ್ರ ಅವರ ಪತ್ನಿ ಹುಸೇನಿ ಎಂಬವರು ಇಲ್ಲಿನ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ ಬಳಿಯ ಮಂಟಪದಲ್ಲಿ ಮುಂಜಾನೆ 4ರ ಸಮಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಹೇಂದ್ರ ಅವರೇ ತಮ್ಮ ಪತ್ನಿಗೆ ಹೆರಿಗೆ ಮಾಡಿಸಿದ್ದಾರೆ. ಬೆಳಕು ಮೂಡಿದ ಬಳಿಕ ಪತ್ನಿ ಮತ್ತು ನವಜಾತ ಶಿಶುವನ್ನು ಮಂಟಪದಿಂದ ಕಾವೇರಿ ನದಿ ಸ್ನಾನಘಟ್ಟದವರೆಗೆ ಮಹೇಂದ್ರ ಕರೆ ತಂದಿದ್ದಾರೆ.
ಸ್ನಾನಘಟ್ಟದ ಬಳಿ ಸಾರ್ವಜನಿಕ ಶೌಚಾಲಯವನ್ನು ನಿರ್ವಹಣೆ ಮಾಡುವ ಶಿವಜಿಸಿಂಗ್ ಎಂಬವರಿಗೆ ವಿಷಯ ತಿಳಿದಿದೆ. ಹುಸೇನಿ ಅವರಿಗೆ ಸ್ನಾನ ಮಾಡಲು ಬಿಸಿ ನೀರು ಮತ್ತು ಆಹಾರ ಕೊಟ್ಟು ಉಪಚರಿಸಿದ್ದಾರೆ. ಬಳಿಕ ಆಟೋದಲ್ಲಿ ನವಜಾತ ಶಿಶು ಮತ್ತು ದಂಪತಿಯನ್ನು ಶಿವಜಿಸಿಂಗ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಸದ್ಯ ಮಗು ಮತ್ತು ಬಾಣಂತಿ ಆಸ್ಪತ್ರೆಯಲ್ಲಿದ್ದು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
‘ಗೌರಿಬಿದನೂರು ತಾಲ್ಲೂಕು ತೊಂಡೆಬಾವಿಯ ಗ್ರಾಮದ ಮುಸ್ಲಿಂ ಧರ್ಮದ ಹುಸೇನಿ ಮತ್ತು ಹಿಂದೂ ಧರ್ಮಕ್ಕೆ ಸೇರಿದ ನಾನು ಕಳೆದ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ಇಷ್ಟಪಟ್ಟು ಮದುವೆಯಾಗಿದ್ದೆವು. ಎರಡೂ ಮನೆಯವರು ನಮ್ಮನ್ನು ಸೇರಿಸದ ಕಾರಣ ಮಂಡ್ಯಕ್ಕೆ ಬಂದು ಅಲ್ಲಿನ ರೈಲ್ವೆ ನಿಲ್ದಾಣದ ಬಳಿ ಚೋಪಡಿ ಕಟ್ಟಿಕೊಂಡು ವಾಸವಾಗಿದ್ದೆವು. ಹುಸೇನಿ ಪಾರ್ಶ್ವವಾಯು ಪೀಡಿತೆಯಾಗಿದ್ದು, ನಾನು ಕೂಲಿ ಕೆಲಸಕ್ಕೆ ಹೋಗುತ್ತಿದ್ದೆ. ಮಂಡ್ಯದಲ್ಲಿ ಇರಲು ಸಮಸ್ಯೆಯಾದ ಕಾರಣ ಎರಡು ದಿನಗಳ ಹಿಂದೆ ಈ ಊರಿಗೆ ಬಂದು ದೇವಾಲಯದ ಮಂಟಪದಲ್ಲಿ ಉಳಿದಿದ್ದೆವು. ಸೋಮವಾರ ಮುಂಜಾನೆ ಹುಸೇನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತು. ರಾತ್ರಿ ಆಗಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲು ಆಗಲಿಲ್ಲ. ಮಂಟಪದಲ್ಲೇ ಈಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ’ ಎಂದು ಮಹೇಂದ್ರ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.