ADVERTISEMENT

ಆತ್ಮನಿರ್ಭರ ಭಾರತ; ಪಡಿತರದಲ್ಲಿ ಬೆಲ್ಲ ವಿತರಣೆಗೆ ಒತ್ತಾಯ

ಮಂಡ್ಯ ಬೆಲ್ಲ, ಆಲೆಮನೆಗಳಿಗೆ ಪುನಶ್ಚೇತನ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 11:46 IST
Last Updated 26 ಜನವರಿ 2021, 11:46 IST

ಮಂಡ್ಯ: ಪಡಿತರ ಚೀಟಿದಾರರಿಗೆ ಸರ್ಕಾರ ಪ್ರತಿ ತಿಂಗಳು ತಲಾ ಒಂದು ಕೆ.ಜಿ ಬೆಲ್ಲ ವಿತರಣೆ ಮಾಡಬೇಕು. ಆ ಮೂಲಕ ನಷ್ಟದಲ್ಲಿರುವ ಆಲೆಮನೆ ಉದ್ಯಮಕ್ಕೆ ರಕ್ಷಣೆ ನೀಡಬೇಕು ಎಂದು ಆಲೆಮನೆ ಮಾಲೀಕರ ಸಂಘದ ಸದಸ್ಯರು ಮಂಗಳವಾರ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರನ್ನು ಒತ್ತಾಯಿಸಿದರು.

ಕೇಂದ್ರ ಸರ್ಕಾರದ ‘ಆತ್ಮನಿರ್ಭರ ಭಾರತ’ ಯೋಜನೆಯಡಿ ಮಂಡ್ಯದ ಬೆಲ್ಲ ತಯಾರಿಕಾ ಘಟಕಗಳಿಗೆ (ಆಲೆಮನೆ) ಪುನಶ್ಚೇತನ ನೀಡುವ ಸಂಬಂಧ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಂಘದ ಸದಸ್ಯರು ಮನವಿ ಸಲ್ಲಿಸಿದರು.

ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅನುಷ್ಠಾನಗೊಳಿಸಿರುವ ಮಾತೃಪೂರ್ಣ ಯೋಜನೆಯಲ್ಲೂ ಗರ್ಭಿಣಿಯರಿಗೆ ರಾಸಾಯನಿಕ ಮುಕ್ತ ಬೆಲ್ಲ ವಿತರಣೆ ಮಾಡಬೇಕು. ಆರೋಗ್ಯದ ದೃಷ್ಟಿಯಿಂದ ಬೆಲ್ಲಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಜಿಲ್ಲೆಯ ಆಲೆಮನೆಗಳಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚಾಗಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ADVERTISEMENT

ಸಚಿವ ಎಸ್‌.ಟಿ.ಸೋಮಶೇಖರ್‌ ಮಾತನಾಡಿ ‘ಆತ್ಮನಿರ್ಭರ ಭಾರತ ಯೋಜನೆಯಡಿ ಬೆಲ್ಲ ಹಾಗೂ ಅದರ ಮೌಲ್ಯವರ್ಧಿತ ಉತ್ಪನ್ನಗಳ ಉದ್ಯಮಕ್ಕೆ ಪುನಶ್ಚೇತನ ನೀಡಲಾಗುವುದು. ಬೆಲ್ಲಕ್ಕೆ ಬ್ರ್ಯಾಂಡ್‌ ರೂಪ ನೀಡಿ ಅಂತರರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸಲಾಗುವುದು. ಇದರಿಂದ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ’ ಎಂದರು.

‘ಆಲೆಮನೆ ಮಾಲೀಕರು ಎದುರಿಸುತ್ತಿರುವ ಸಮಸ್ಯೆ ಸೇರಿದಂತೆ ಯೋಜನೆ ಜಾರಿಗೆ ಅಡ್ಡಿಯಾಗಿರುವ ಸವಾಲುಗಳ ಅಧ್ಯಯನಕ್ಕೆ ಸಮಿತಿ ರಚನೆ ಮಾಡಲಾಗುವುದು. ಫೆ.6ರೊಳಗೆ ವರದಿ ಪಡೆದು ಸಚಿವ ಸಂಪುಟದ ಅನುಮೋದನೆಯೊಂದಿಗೆ ಬಜೆಟ್‌ ಘೋಷಣೆಗೆ ಸೇರಿಸಲಾಗುವುದು’ ಎಂದರು.

‘ಒಂದು ಜಿಲ್ಲೆ ಒಂದು ಉತ್ಪನ್ನ ಮಾದರಿಯಡಿ ಆಲೆಮನೆಗಳ ಮೇಲ್ದರ್ಜೆಗೇರಿಸುವುದು, ತಂತ್ರಜ್ಞಾನ ಅಳವಡಿಕೆ ಹಾಗೂ ರಪ್ತಿಗೆ ಆದ್ಯತೆ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.