ಮೇಲುಕೋಟೆ: ರೈತರು ವೈಯಕ್ತಿಕ ಕೆಲಸಗಳನ್ನು ಬಿಟ್ಟು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ‘ಸರ್ಕಾರಿ ಸೇವೆಗಳು ಮನೆ ಬಾಗಿಲಿಗೆ’ ಎಂಬ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಹೋಬಳಿಯ ಮಾಣಿಕ್ಯನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
15 ದಿನಗಳು ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಕಂದಾಯ, ಪಂಚಾಯತ್ ರಾಜ್, ಕೃಷಿ, ನೀರಾವರಿ, ತೋಟಗಾರಿಕೆ, ಸೆಸ್ಕ್ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಒಂದೇ ಸೂರಿನಡಿ ಕುಳಿತು ಜನರ ಸಮಸ್ಯೆಗಳನ್ನು ಇತ್ಯರ್ಥಪಡಿಸಿದ್ದಾರೆ ಎಂದರು.
‘ತಾಲ್ಲೂಕಿನ ಕೆನ್ನಾಳು, ಹಳೆಬೀಡು ಬನ್ನಂಗಾಡಿ ಮತ್ತು ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಂದಗಾಲು ಗ್ರಾಮದಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮ ಯಶಸ್ವಿಯಾಗಿದೆ. ಪಂಚಾಯಿತಿ ವ್ಯಾಪ್ತಿಯನ್ನು ಆಯ್ಕೆ ಮಾಡಿಕೊಂಡು ಕೆಲಸ ಆರಂಭಿಸಿದಾಗ ಕೆಲ ಗ್ರಾಮಸ್ಥರ ವಿರೋಧ ಉಂಟಾಯಿತು. ಆದರೆ ಈಗ ಒಳ್ಳೆಯದಾಗಿದೆ. ಜನರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 1,671 ಮನೆಗಳಿದ್ದು, ಇ-ಸ್ವತ್ತು ಪಡೆಯಲು 407 ಅರ್ಜಿಗಳು ಬಂದಿದ್ದು, 166 ಮನೆಯವರು ಇ– ಸ್ವತ್ತು ಪಡೆದಿದ್ದಾರೆ ಎಂದರು.
‘ರಸ್ತೆ ಒತ್ತುವರಿ ತೆರವು, ಪೌತಿ ಖಾತೆ, ಪಹಣಿ ತಿದ್ದುಪಡಿ, ಖಾತೆ, ಇ-ಸ್ವತ್ತು, ವೃದ್ಧಾಪ್ಯ, ವಿಧವಾ, ಅಂಗವಿಕಲರ ಪಿಂಚಣಿ, ಮನಸ್ವಿನಿ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಸೇರಿದಂತೆ ಎಲ್ಲಾ ರೀತಿಯ ಸೇವೆಗಳನ್ನು ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ಒದಗಿಸಿದ್ದಾರೆ. ಆಸ್ತಿ ಹಂಚಿಕೆ ವಿಚಾರದಲ್ಲಿ ನಾನೇ ಖುದ್ದು ನಿಂತು ಕುಟುಂಬದ ಸದಸ್ಯರ ನಡುವೆ ವಿವಾದಗಳನ್ನು ಮುಖಂಡರ ಸಮ್ಮುಖದಲ್ಲಿ ಬಗೆಹರಿಸಿದ್ದೇನೆ’ ಎಂದು ಹೇಳಿದರು.
‘ಪಂಚಾಯತ್ ರಾಜ್ ಇಲಾಖೆಯಿಂದ ₹10.50 ಕೋಟಿ ಕೋಟಿ ಅನುದಾನದಲ್ಲಿ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗಿದೆ’ ಎಂದರು.
ತಹಶೀಲ್ದಾರ್ ಎಸ್.ಸಂತೋಷ್ ಮಾತನಾಡಿ, ‘ಪೌತಿ ಖಾತೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ’ ಎಂದರು.
ಒತ್ತುವರಿಯಾಗಿದ್ದ ಸ್ಮಶಾನ, ರಸ್ತೆಗಳು, ಕೆರೆಕಟ್ಟೆಗಳು ಮತ್ತು ಶಾಲೆಗೆ ಸೇರಿದ ಜಾಗಗಳನ್ನು ದರ್ಶನ್ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ತೆರವುಗೊಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಲೋಕೇಶ್ ಮೂರ್ತಿ, ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್. ಕೆಂಪೂಗೌಡ, ತಾಲ್ಲೂಕು ಅಧ್ಯಕ್ಷ ಕೆನ್ನಾಳು ವಿಜಯಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.