ADVERTISEMENT

ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಿ: ಮಾಜಿ ಸಚಿವ ತಮ್ಮಣ್ಣ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 6:15 IST
Last Updated 31 ಡಿಸೆಂಬರ್ 2025, 6:15 IST
ಡಿ.ಸಿ.ತಮ್ಮಣ್ಣ
ಡಿ.ಸಿ.ತಮ್ಮಣ್ಣ   

ಮಂಡ್ಯ: ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯಗಳ ನಡುವೆ ಜಿದ್ದಾಜಿದ್ದಿ ಹೆಚ್ಚಾಗಿದೆ. ಈ ನಡುವೆ ರಾಜ್ಯದಲ್ಲಿ ಕೈಗಾರಿಕೆ ಸ್ಥಾಪಿಸಲು ಸರ್ಕಾರ ಎಡವಿದೆ. ಮಂಡ್ಯ ಜಿಲ್ಲೆ ಕೈಗಾರಿಕೆ ಸ್ಥಾಪಿಸಲು ಸೂಕ್ತವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲ ಶಾಸಕರ ಸಭೆ ಆಯೋಜಿಸಿ ಆಹ್ವಾನಿಸಿದರೆ, ಕೇಂದ್ರ ಸಚಿವರು, ನಮ್ಮ ಹಾಲಿ ಮತ್ತು ಮಾಜಿ ಶಾಸಕರನ್ನು ಸಭೆಗೆ ಕರೆತರುತ್ತೇನೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಸಲಹೆ ನೀಡಿದರು.

ಅನುದಾನ ತರಲಾಗದೇ ರಾಜ್ಯ ಸರ್ಕಾರವನ್ನು ಟೀಕಿಸುತ್ತಿದ್ದಾರೆ ಎನ್ನುವ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರ ಹೇಳಿಕೆ ಬಾಲಿಶವಾಗಿದೆ. ಆದರೆ ಇಲ್ಲಿ ಕೈಗಾರಿಕೆ ಸ್ಥಾಪಿಸಿ, ಉದ್ಯೋಗಾವಕಾಶ ಸೃಷ್ಟಿಸಲು ರಾಜ್ಯ ಸರ್ಕಾರವೇ ಮನಸ್ಸು ಮಾಡುತ್ತಿಲ್ಲ. ಹಾಗಾಗಿ ಕೈಗಾರಿಕೆಗಳ ಸ್ಥಾಪನೆಗೆ ಸೂಕ್ತ ಮೂಲಸೌಕರ್ಯ ಒದಗಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಆಗ್ರಹಿಸಿದರು.

ಮಾಜಿ ಶಾಸಕ ಕೆ.ಸುರೇಶ್‌ಗೌಡ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಪತ್ರಕರ್ತರೊಂದಿಗೆ ನಡೆದುಕೊಂಡ ರೀತಿಯಿಂದ ಬೇಸರವಾಗಿದೆ. ಹಾಗಾಗಿ ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ಮಳವಳ್ಳಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಿಗೆ ದೊರೆತ ಗೌರವ, ಚಪ್ಪಾಳೆ, ಸೀಟಿಗಳ ಜೈಕಾರದ ಪರಿಣಾಮ ಜಿಲ್ಲಾ ಉಸ್ತುವಾರಿ ಸಚಿವರು ಮಾಧ್ಯಮಗಳ ಮೇಲೆ ಕೋಪ ತೋರಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸಚಿವರ ಸಹಕಾರ ಬೇಡ ಎಂದು ರಾಜ್ಯ ಸರ್ಕಾರ ಬಹಿರಂಗವಾಗಿ ಹೇಳಲಿ ಎಂದರು.

ADVERTISEMENT

‘ನಾಗಮಂಗಲದಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಗಣಿ ಲೂಟಿ ಮಾಡಲಾಗುತ್ತಿದೆ. ಅರಣ್ಯದಲ್ಲಿ ಗಣಿಗಾರಿಕೆ ಮಾಡಲು ಜಿಲ್ಲೆಯ ಅಧಿಕಾರಿಗಳೇ ರಸ್ತೆ ಮಾಡಿಕೊಡುತ್ತಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.

ಶಾಸಕ ಎಚ್.ಟಿ.ಮಂಜು ಮಾತನಾಡಿದರು. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ಮುಖಂಡರಾದ ಬಿ.ಆರ್.ರಾಮಚಂದ್ರು, ಅಂದಾನಿ ಇದ್ದರು.

ಸಿ.ಎಸ್‌.ಪುಟ್ಟರಾಜು

ಪತ್ರಕರ್ತರಿಗೆ ಬೆದರಿಕೆ ಹಾಕಬೇಡಿ: ಪುಟ್ಟರಾಜು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಮಾತನಾಡಿ ‘ಇಷ್ಟ ಬಂದಂತೆ ಮಾತನಾಡಬೇಡಿ. ಅಧಿಕಾರ ಶಾಶ್ವತವಲ್ಲ. ದರ್ಪ ಬಿಟ್ಟು ಸೌಜನ್ಯದಿಂದ ನಡೆದುಕೊಳ್ಳಬೇಕು. ಬಾಯಿ ಇದೆ ಎಂಬ ಕಾರಣಕ್ಕೆ ಪತ್ರಕರ್ತರಿಗೆ ಬೆದರಿಕೆಯೊಡ್ಡುವ ಕೆಲಸ ಮಾಡುವುದನ್ನು ಬಿಡಬೇಕು’ ಎಂದು ಸಲಹೆ ನೀಡಿದರು. ‘ಜಿಲ್ಲೆಯ ಉಸ್ತುವಾರಿ ಸಚಿವರು ಜಿಲ್ಲೆಯಿಂದ ಆಯ್ಕೆಯಾದ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಜಿಲ್ಲೆಯ ಉದ್ಯೋಗ ಸಮಸ್ಯೆ ಬಗೆಹರಿಸಲು ಏಕೆ ಕ್ರಮ ವಹಿಸುತ್ತಿಲ್ಲ’ ಎಂದು ಪ್ರಶ್ನಿಸಿದರು.

ಅರ್ಜಿ ಸಲ್ಲಿಸಿ ಜಾಗ ಕೇಳಿ: ಚಲುವರಾಯಸ್ವಾಮಿ ‘ಇದುವರೆಗೆ ಕೆಐಎಡಿಬಿಗೆ ಯಾರೂ ಅರ್ಜಿ ಸಲ್ಲಿಸಿಲ್ಲ. ಅರ್ಜಿ ಸಲ್ಲಿಸಿದ ನಂತರ ಜಿಲ್ಲಾಧಿಕಾರಿಯವರು ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿ ಜಾಗವನ್ನು ಹಸ್ತಾಂತರ ಮಾಡುತ್ತಾರೆ. ನಿಯಮಾನುಸಾರ ಅರ್ಜಿ ಸಲ್ಲಿಸುವುದನ್ನು ಬಿಟ್ಟು ಪ್ರಧಾನಿ ಅಥವಾ ಕೇಂದ್ರಸಚಿವರೇ ಬಾಯಿ ಮಾತಿನಲ್ಲಿ ಜಾಗ ಕೇಳಿದರೆ ಅದು ಹೇಳಿಕೆಯಾಗಿ ಉಳಿಯುತ್ತದೆ ಅಷ್ಟೆ’ ಎಂದು ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು.  ಕಾಡಾ ವ್ಯಾಪ್ತಿಯಲ್ಲಿ ಸಾತನೂರು ಬಳಿ 80 ಎಕರೆ ಭೂಮಿ ಇದೆ. ಯಾವುದೇ ಕಂಪನಿ ಕೆಐಎಡಿಬಿಗೆ ಅರ್ಜಿ ಸಲ್ಲಿಸಿದರೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ನೇರವಾಗಿ (ಭೂಸ್ವಾಧೀನವಿಲ್ಲದೆ) ಹಸ್ತಾಂತರ ಮಾಡುತ್ತೇವೆ. ಒಂದು ಅರ್ಜಿ ಹಾಕಿಸಲಿ. ಜಿಲ್ಲೆಯ ಹಿತದೃಷ್ಟಿಯಿಂದ 15 ದಿನದೊಳಗೆ ಸಭೆ ಕರೆಯೋಣ ಎಂದು ಪ್ರತಿಕ್ರಿಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.