ಮಂಡ್ಯ: ‘ಜೀವನಾಡಿ’ ಕನ್ನಡ ಮಾಸಪತ್ರಿಕೆ ವತಿಯಿಂದ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸ್ಪರ್ಧೆ–2025 ಅಂಗವಾಗಿ ಕಥಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಪತ್ರಿಕೆಯ ಸಂಪಾದಕ ಎಚ್.ಎಸ್. ಮುದ್ದೇಗೌಡ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಥೆ 2,500 ಪದಗಳನ್ನು ಮೀರಬಾರದು, ಪ್ರಬಂಧ 2 ಸಾವಿರ ಪದಗಳನ್ನು ಮೀರಬಾರದು, ಕವಿತೆಗಳು 24 ಸಾಲುಗಳನ್ನು ಮೀರಬಾರದು, ಸದರಿ ಸ್ಪರ್ಧೆಗೆ ಪ್ರಸ್ತುತ ಪಡಿಸುವ ಕಥೆ, ಪ್ರಬಂಧ, ಕವನಗಳು ಬ್ಲಾಗ್, ಸಾಮಾಜಿಕ ಜಾಲತಾಣ ಸೇರಿದಂತೆ ಬೇರೆಲ್ಲೂ ಪ್ರಕಟವಾಗಿರಬಾರದು, ಅನುವಾದಿತ ಕಥೆ, ಪ್ರಬಂಧ, ಕವಿತೆಗಳಿಗೆ ಅವಕಾಶವಿಲ್ಲ, ಸ್ವಂತ ರಚನೆಯಾಗಿರಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಲೇಖನಗಳನ್ನು ನುಡಿ ತಂತ್ರಾಂಶದಲ್ಲಿ ಟೈಪ್ ಮಾಡಿಸಿ ಇ ಮೇಲ್: jeevanaadi22@ gmail.com ವಿಳಾಸಕ್ಕೆ ಕಳುಹಿಸಬೇಕು. ಲೇಖನದ ಜತೆ ಲೇಖಕರ ಭಾವಚಿತ್ರ, ವಿಳಾಸ, ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸವನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಲಗತ್ತಿಸಬೇಕು. ಲಕೋಟೆಯ ಮೇಲೆ ಜೀವನಾಡಿ ಸಾಹಿತ್ಯ ಸ್ಪರ್ಧೆ-2025 ಎಂದು ನಮೂದಿಸಬೇಕು. ಕಥೆ, ಪ್ರಬಂಧ, ಕವನಗಳನ್ನು ಸಲ್ಲಿಸಲು ಆ.15 ಕೊನೆಯ ದಿನವಾಗಿದ್ದು, ನಂತರ ಬಂದಲ್ಲಿ ಪರಿಗಣಿಸಲಾಗುವುದಿಲ್ಲ ಎಂದರು.
ಕಥಾ ಸ್ಪರ್ಧೆಗೆ ₹15 ಸಾವಿರ, ಪ್ರಬಂಧ ಸ್ಪರ್ಧೆಗೆ ₹10 ಸಾವಿರ, ಕವನ ಸ್ಪರ್ಧೆಗೆ ₹5 ಸಾವಿರ, ರಂಗಭೂಮಿ ಪ್ರಶಸ್ತಿಗೆ ₹10 ಸಾವಿರ ರೂ ನಗದು ನೀಡಲಿದ್ದು, ವಿಜೇತರಿಗೆ ಸನ್ಮಾನ, ಪ್ರಶಸ್ತಿ ಫಲಕ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಸದರಿ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮವು ಸೆ.14ರ ಬೆಳಿಗ್ಗೆ 10 ಗಂಟೆಗೆ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಧನಂಜಯ ದರಸಗುಪ್ಪೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.