ADVERTISEMENT

ಮಂಡ್ಯ: ಕದಂಬ ಪ್ರಶಸ್ತಿ ಪ್ರದಾನ ನಾಳೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 4:01 IST
Last Updated 16 ಜುಲೈ 2025, 4:01 IST
ಬೇಕ್ರಿ ರಮೇಶ್‌
ಬೇಕ್ರಿ ರಮೇಶ್‌   

ಮಂಡ್ಯ: ಕದಂಬ ಸೈನ್ಯ ಕನ್ನಡ ಸಂಘಟನೆ ವತಿಯಿಂದ ಕದಂಬ- ಚಾಲುಕ್ಯ- ರಾಷ್ಟ್ರಕೂಟ ಚಕ್ರವರ್ತಿಗಳ ಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜುಲೈ 17ರಂದು ಬೆಳಿಗ್ಗೆ 11ಕ್ಕೆ ನಗರದ ಗಾಂಧಿ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬೇಕ್ರಿ ರಮೇಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಘಟನೆಯ ಅಧ್ಯಕ್ಷ ಬೇಕ್ರಿ ರಮೇಶ್ ಅಧ್ಯಕ್ಷತೆ ವಹಿಸುವರು. ಮೈಸೂರು ವಿವಿಯ ಮಾಜಿ ಸೆನಟ್ ಸದಸ್ಯ ಈ.ಸಿ. ನಿಂಗರಾಜ್‌ಗೌಡ, ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಹರೀಶ್‌ಕುಮಾರ್ ಎಂ.ಕೆ, ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ’ ಎಂದು ಹೇಳಿದರು.

ಬೆಂಗಳೂರಿನ ಸಮಾಜ ಸೇವಕ ಎನ್.ನರಸಿಂಹಮೂರ್ತಿ ಅವರಿಗೆ ‘ಕದಂಬ ಚಾಲುಕ್ಯ ರಾಷ್ಟ್ರಕೂಟ ಪ್ರಶಸ್ತಿ’, ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ ಮಾಜಿ ಅಧ್ಯಕ್ಷ ವಿಶಾಲ್‌ ರಘು ಅವರಿಗೆ ‘ತಲಕಾಡು ಗಂಗ ಸಾಮ್ರಾಟ್ ಪ್ರಶಸ್ತಿ’, ಸಮಾಜಸೇವಕ ಎಂ.ಜೆ. ಯೋಗೇಶ್ ಅವರಿಗೆ ‘ಕದಂಬ ರತ್ನ ಪ್ರಶಸ್ತಿ’, ಮಂಡ್ಯ ಉತ್ತರ ವಲಯ ಬಿಇಒ ಕೆ.ಟಿ. ಸೌಭಾಗ್ಯಾ, ಜೂನಿಯರ್ ಮಾಲಾಶ್ರೀ ಖ್ಯಾತಿಯ ನಟಿ ಮಂಜುಳಾ ಅವರಿಗೆ ‘ಕದಂಬ ವೀರರಾಣಿ ಚೆನ್ನಭೈರಾದೇವಿ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು.

ADVERTISEMENT

‘ಕದಂಬ ಹೊಯ್ಸಳ ರತ್ನ ಪ್ರಶಸ್ತಿ’ಗೆ ಚಿತ್ರದುರ್ಗದ ಸಮಾಜಸೇವಕ ಆರ್. ಶ್ರೀನಿವಾಸ್, ಬಾಗಲಕೋಟೆಯ ಕನ್ನಡಪರ ಹೋರಾಟಗಾರ ಪರಶುರಾಮ ವಿಠಲ ಕಟ್ಟಿ ಬಾದಾಮಿ ಹಾಗೂ ‘ಕದಂಬ ವೀರಯೋಧ ಪ್ರಶಸ್ತಿ’ಗೆ ಮಂಡ್ಯದ ಮಹಮ್ಮದ್ ಮರದನ್, ಜೆ.ತಂಗರಾಜು, ಎಂ.ಎಸ್. ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

ಇದೇ ವೇಳೆ 28 ಪೊಲೀಸ್ ಅಧಿಕಾರಿಗಳು ಮತ್ತ ಸಿಬ್ಬಂದಿಗೆ ವಿಶೇಷವಾಗಿ ‘ಕದಂಬ ಆರಕ್ಷಕ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ತಾ.ಪಂ. ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಎಎಸ್ಪಿಗಳಾದ ಎಸ್‌.ಈ. ಗಂಗಾಧರಸ್ವಾಮಿ, ಸಿ.ಇ. ತಿಮ್ಮಯ್ಯ ಮುಂತಾದವರು ಪಾಲ್ಗೊಳ್ಳಿದ್ದಾರೆ. 

ಬೆಂಗಳೂರಿನ ವಿಧಾನಸೌಧದ ಎದುರು ಹಾಗೂ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕನ್ನಡದ ಮೊದಲ ದೊರೆ ಮಯೂರವರ್ಮ, ಚಾಲುಕ್ಯ ದೊರೆ ಇಮ್ಮಡಿ ಪುಲಿಕೇಶಿ ಹಾಗೂ ರಾಷ್ಟ್ರಕೂಡ ನೃಪತುಂಗ ಚಕ್ರವರ್ತಿಗಳ ಪುತ್ಥಳಿಗಳನ್ನು ಸರಕಾರ ಸ್ಥಾಪಿಸಬೇಕೆಂದು ಬೇಕ್ರಿ ರಮೇಶ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ರಾಮು, ಜಿಲ್ಲಾ ಸಂಚಾಲಕ ಸಲ್ಮಾನ್, ಜಿಲ್ಲಾ ಸಲಹೆಗಾರ ಮೋಹನ್ ಚಿಕ್ಕಮಂಡ್ಯ, ಆರಾಧ್ಯ, ರಕ್ಷಿತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.