ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಇನ್ನೂ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ತಾಲ್ಲೂಕಿನ ಬಲಮುರಿ ಪ್ರಕೃತಿ ತಾಣದ ಬಳಿ ದುಡ್ಡಿನ ಆಸೆಗೆ ಪ್ರವಾಸಿಗರನ್ನು ತೆಪ್ಪದಲ್ಲಿ ಕೂರಿಸಿ ವಿಹಾರ ಮಾಡಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಬಲಮುರಿ ದೇವಾಲಯಗಳ ಅಭಿವೃದ್ಧಿ ಸಮಿತಿಯಿಂದ ಮೂರು ತೆಪ್ಪಗಳನ್ನು ನದಿಗೆ ಇಳಿಸಿ ಅದರಲ್ಲಿ ಪ್ರವಾಸಿಗರನ್ನು ಕೂರಿಸಿ ವಿಹಾರ ಮಾಡಲು ಅವಕಾಶ ನೀಡಲಾಗಿದೆ. ನದಿಯ ನೀರಿನ ಮಟ್ಟದಲ್ಲಿ ಏರಿಳಿತ ಆಗುತ್ತಲೇ ಇದೆ. ಕೆಆರ್‌ಎಸ್ ಜಲಾಶಯದಿಂದ ಗುರುವಾರ 13,442 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗಿದೆ ಎಂದು ಕಾವೇರಿ ನೀರಾವರಿ ನಿಗಮ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ. ಹಾಗಾಗಿ ನದಿಯಲ್ಲಿ ನೀರಿನ ಸೆಳೆತ ಇದ್ದೇ ಇದೆ. ಬಲಮುರಿ ಒಡ್ಡಿನ ಬಳಿ ನೀರು ರಭಸವಾಗಿ ಹರಿಯುತ್ತಿದ್ದರೂ ಲೆಕ್ಕಿಸದೆ ಪ್ರವಾಸಿಗರನ್ನು ತೆಪ್ಪದಲ್ಲಿ ಕೂರಿಸಿಕೊಂಡು ವಿಹಾರ ಮಾಡಿಸುತ್ತಿರುವುದು ಅಚ್ಚರಿ ಮೂಡಿಸಿದೆ.
ಬಲಮುರಿ ತಾಣ ಅತ್ಯಂತ ಸೂಕ್ಷ್ಮ ಪ್ರದೇಶ. ಇಲ್ಲಿ ನೀರಿಗೆ ಇಳಿಯುವ ಪ್ರವಾಸಿಗರ ಪೈಕಿ ವರ್ಷಕ್ಕೆ 10ರಿಂದ 15 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಬಲಮುರಿ ತಾಣಕ್ಕೆ ಕೂಗಳತೆ ದೂರದಲ್ಲಿ, ಜುಲೈ 6ರಂದು ನದಿ ದಡದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಬೇಲೂರಿನ ಆಟೊ ಚಾಲಕ ಮಹೇಶ್ ಆಯ ತಪ್ಪಿ ನದಿಗೆ ಬಿದ್ದಿದ್ದು ಇದುವರೆಗೂ ಪತ್ತೆಯಾಗಿಲ್ಲ.
ಪರಿಸ್ಥಿತಿ ಹೀಗಿದ್ದರೂ ಬಲಮುರಿಯಲ್ಲಿ ತೆಪ್ಪ ವಿಹಾರ ನಿರಾತಂಕವಾಗಿ ನಡೆದಿದೆ. ಒಂದು ತೆಪ್ಪದಲ್ಲಿ 7ರಿಂದ 8 ಮಂದಿಯನ್ನು ಕೂರಿಸಿಕೊಂಡು ಒಂದು ದಡದಿಂದ ಮತ್ತೊಂದು ದಡದವರೆಗೆ ವಿಹಾರ ಮಾಡಿಸಲಾಗುತ್ತಿದೆ. ಒಂದು ವೇಳೆ ತೆಪ್ಪ ಮಗುಚಿಕೊಂಡರೆ ದೊಡ್ಡ ಅನಾಹುತವೇ ಘಟಿಸಲಿದೆ.
ನಿಷೇಧಾಜ್ಞೆ ಉಲ್ಲಂಘನೆ
‘ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಇರುವುದರಿಂದ ನದಿ ತೀರಕ್ಕೆ ಯಾರೂ ತೆರಳದಂತೆ ತಾಲ್ಲೂಕು ಆಡಳಿತ ಕಟ್ಟು ನಿಟ್ಟಿನ ಆದೇಶ ಮಾಡಿದೆ. ನದಿ ತೀರದ ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆ ಕೂಡ ಜಾರಿಯಲ್ಲಿದೆ. ಆದರೆ, ಬಲಮುರಿ ತಾಣದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ದೋಣಿ ವಿಹಾರ ನಡೆಸುವ ಮೂಲ ಜನರ ಜೀವನದ ಜತೆ ಚೆಲ್ಲಾಟ ಆಡಲಾಗುತ್ತಿದೆ. ಕಂದಾಯ, ಪೊಲೀಸ್ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ. ಆಕಸ್ಮಾತ್ ತೆಪ್ಪ ಮಗುಚಿ ಬಿದ್ದು ಅನಾಹುತ ಘಟಿಸಿದರೆ ಯಾರು ಹೊಣೆ’? ಎಂಬುದು ಬೆಳಗೊಳ ಗ್ರಾಮದ ರೈತ ಮುಖಂಡ ವಿಷಕಂಠು ಪ್ರಶ್ನೆ.
ಬಲಮುರಿ ಬಳಿ ನದಿಯಲ್ಲಿ ಪ್ರವಾಸಿಗರು ವಿಹಾರ ನಡೆಸುತ್ತಿರುವ ವಿಷಯ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಕ್ರಮ ವಹಿಸಲಾಗುವುದು ಎಂದು.– ವಿ. ಜಯಂತ್, ಕಾರ್ಯಪಾಲಕ ಎಂಜಿನಿಯರ್ ಕಾವೇರಿ ನೀರಾವರಿ ನಿಗಮ
ಸಿಬ್ಬಂದಿ ಕೊರತೆಯಿಂದ ಬಲಮುರಿ ತಾಣದ ಬಳಿ ಪೊಲೀಸರನ್ನು ನಿಯೋಜಿಸಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ನಿಯಮ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು.– ರಮೇಶ್ ಕರ್ಕಿಕಟ್ಟಿ, ಸಬ್ ಇನ್‌ಸ್ಪೆಕ್ಟರ್ ಕೆಆರ್‌ಎಸ್ ಪೊಲೀಸ್ ಠಾಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.