ADVERTISEMENT

ಮೇಲುಕೋಟೆ: ಸಹಸ್ರಕಳಶಾಭಿಷೇಕ ಮಹೋತ್ಸವ

ವೈರಮುಡಿ ಕಿರೀಟ ಧಾರಣಾ ಮಹೋತ್ಸವಕ್ಕೆ ಪೂರಕವಾಗಿ, ಪ್ರಾಯಶ್ಚಿತಪೂರ್ವಕವಾಗಿ ನಡೆದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 3:29 IST
Last Updated 6 ಮಾರ್ಚ್ 2021, 3:29 IST
ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ಸಹಸ್ರಕಳಶಾಭಿಷೇಕ ವೇಳೆ ನಡೆದ ಪ್ರಥಮ ಅಲಂಕಾರ
ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ಸಹಸ್ರಕಳಶಾಭಿಷೇಕ ವೇಳೆ ನಡೆದ ಪ್ರಥಮ ಅಲಂಕಾರ   

ಮೇಲುಕೋಟೆ: ಮಾರ್ಚ್‌ 24ರಂದು ನಡೆಯುವ ವೈರಮುಡಿ ಕಿರೀಟ ಧಾರಣಾ ಮಹೋತ್ಸವಕ್ಕೆ ಪೂರಕವಾಗಿ, ಪ್ರಾಯಶ್ಚಿತಪೂರ್ವಕವಾಗಿ ಮೇಲುಕೋಟೆ ದೇವಾಲಯದಲ್ಲಿ ಚೆಲುವನಾರಾಯಣಸ್ವಾಮಿಗೆ ಶುಕ್ರವಾರ ಸಹಸ್ರಕಳಶಾಭಿಷೇಕ ನೆರವೇರಿತು.

ಕೊರೊನಾದಿಂದಾಗಿ ಕಳೆದ ವರ್ಷ ವೈರಮುಡಿ ಬ್ರಹ್ಮೋತ್ಸವ ಸ್ಥಗಿತಕೊಂಡಿತ್ತು. ಈ ಕಾರಣದಿಂದ ಈ ಬಾರಿಯ ಜಾತ್ರಾ ಮಹೋತ್ಸವಕ್ಕೂ ಮುನ್ನ ಅಮ್ಮನವರ ಸನ್ನಿಧಿಯ ಮುಂಭಾಗ 25 ಆರಾಧನೆಯೊಂದಿಗೆ 600 ದ್ರವ್ಯಗಳಿಂದ ರಾಮಾನುಜರು, ಆಳ್ವಾರರು ಮತ್ತು ಶ್ರೀದೇವಿ-ಭೂದೇವಿ ಸಮೇತ ವಿರಾಜಮಾನನಾದ ಉತ್ಸವಮೂರ್ತಿ ಚೆಲುವನಾರಾಯಣಸ್ವಾಮಿಗೆ ಸಹಸ್ರ ಕಳಶಾಭಿಷೇಕ ನೆರವೇರಿಸಲಾಯಿತು.

ವೇದಘೋಷ ದೊಂದಿಗೆ ನೆರವೇರಿದಸಹಸ್ರ ಕಳಶಾಭಿಷೇಕದಲ್ಲಿ ಯದುಗಿರಿ ಯತಿರಾಜ ಶ್ರೀಮನ್ನಾರಾ ಯಣ ಜೀಯರ್, ಮೈಸೂರು ರಾಜಗುರು ಪರಕಾಲಶ್ರೀ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಭಾಗಿಯಾದರು.

ADVERTISEMENT

ದಶಕಗಳ ಕಾಲ ದೇವರ ಅರ್ಚನಾವೃತ್ತಿ ಮಾಡಿದ ಸಂಪತ್ಕುಮಾರ ಭಟ್ಟರ್ ಸ್ವಾಮಿಗೆ ಅಭಿಷೇಕ ಮಾಡಿದರು.

ದೇವಾಲಯದ ಆಡಳಿತಾಧಿಕಾರಿ, ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್ ಪ್ರಮೋದ್ ಪಾಟೀಲ್, ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಮಂಗಳಮ್ಮ ಸಮಕ್ಷಮದಲ್ಲಿ ಬೆಳಿಗ್ಗೆ 8 ಗಂಟೆಗೆ ಕಳಶಾರಾಧನೆಯೊಂದಿಗೆ ಆರಂಭವಾದ ಮಹಾಭಿಷೇಕ ಸಂಜೆವರೆಗೂ ನೆರವೇರಿತು.

ಚೆಲುವನಾರಾಯಣನಿಗೆ 25 ಬಗೆಯ ಪುಷ್ಪಗಳು, ಒಣಹಣ್ಣುಗಳು, ವಿವಿಧ ಬಗೆಯ ಆಲಂಕಾರಿಕ ಕಿರೀಟವನ್ನು ತೊಡಿಸಿ ಸಾವಿರ ಕಳಶಗಳಿಂದ ಅಭಿಷೇಕ ನೆರವೇರಿ ಸಲಾಯಿತು. ಮೂಲಮೂರ್ತಿ ಚೆಲ್ವತಿರುನಾರಾಯಣಸ್ವಾಮಿಗೆ ಕುಂಭದ ತೀರ್ಥಪ್ರೋಕ್ಷಣೆ ಮಾಡಿ ಅಭಿಷೇಕದ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಉತ್ಸವಮೂರ್ತಿ ಚೆಲುವನಾರಾ ಯಣಸ್ವಾಮಿಗೆ ಸಹಸ್ರಕ ಳಶಾಭಿಷೇಕದ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಮೂಲಮೂರ್ತಿಯ ದರ್ಶನಕ್ಕೆ ಭಕ್ತರು ಮತ್ತು ಗಣ್ಯರಿಗೆ ಅವಕಾಶ ಮಾಡಿಕೊಡಲಾಗಿತ್ತು. ಸಹಸ್ರಕಳಶಾಭಿಷೇಕದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.