ADVERTISEMENT

ಮಂಡ್ಯ | ಕಲ್ಮನೆ ಕಾಮೇಗೌಡರ ಸೇವೆ ಕೊಂಡಾಡಿದ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 13:54 IST
Last Updated 28 ಜೂನ್ 2020, 13:54 IST
ಕಟ್ಟೆ ಎದುರು ಕಲ್ಮನೆ ಕಾಮೇಗೌಡ
ಕಟ್ಟೆ ಎದುರು ಕಲ್ಮನೆ ಕಾಮೇಗೌಡ   

ಮಳವಳ್ಳಿ (ಮಂಡ್ಯ ಜಿಲ್ಲೆ): ಕುಂದನಿ ಬೆಟ್ಟದ ಮೇಲೆ ಕಟ್ಟೆ ತೋಡಿಸಿ ಪ್ರಾಣಿ– ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಿರುವ ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ ಪ್ರಕೃತಿ ಸಂರಕ್ಷಕ ಕಲ್ಮನೆ ಕಾಮೇಗೌಡರ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ಭಾನುವಾರ ‘ಮನ್‌ ಕಿ ಬಾತ್‌’ 66ನೇ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ, 83 ವರ್ಷ ವಯಸ್ಸಿನ ಕಾಮೇಗೌಡರು ಬೆಟ್ಟದ ಮೇಲೆ 16 ಕಟ್ಟೆ ಕಟ್ಟಿಸುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ. ಶಾಲೆಯ ಮೆಟ್ಟಿಲು ಹತ್ತದ ಅವರು ಸಾವಿರಾರು ಸಸಿ ಬೆಳೆಸಿದ್ದಾರೆ. ನೀಲಿ ವೆಂಕಟಗೌಡ, ರಾಜಮ್ಮ ದಂಪತಿಯ ಪುತ್ರರಾದ ಅವರು ಪರಿಸರ ರಕ್ಷಣೆಗೆ ಮಾದರಿಯಾಗಿದ್ದಾರೆ. ಅವರ ಸೇವೆ ಗುರುತಿಸಿರುವ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಸಾಮಾನ್ಯ ಪ್ರಜೆಯನ್ನೂ ಗುರುತಿಸುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕಾಗಿ ದುಡಿಯುತ್ತಿದ್ದಾರೆ. ಕೊರೊನಾ ಸೋಂಕಿನ ನಡುವೆಯೂ ಸೇವೆಯನ್ನು ಗುರುತಿಸಿದ್ದಾರೆ. ನನ್ನಂತಹ ಬಡ ವ್ಯಕ್ತಿಯ ಕೆಲಸ ಪ್ರಸ್ತಾಪ ಮಾಡುವ ಮೂಲಕ ಅವರು ದೊಡ್ಡವರೆನಿಸಿಕೊಂಡಿದ್ದಾರೆ’ ಎಂದು ಕಾಮೇಗೌಡ ಪ್ರತಿಕ್ರಿಯಿಸಿದರು.

ADVERTISEMENT

ವಿಡಿಯೊ ಸಂವಾದ: ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿಡಿಯೊ ಕಾಲ್ ಮಾಡಿ ಕಾಮೇಗೌಡರೊಂದಿಗೆ ಮಾತನಾಡಿದರು. ಅವರ ಕೆಲಸಗಳನ್ನು ಶ್ಲಾಘಿಸಿದ ಸಚಿವರು ಸೇವೆ ಮುಂದುವರಿಸುವಂತೆ ಮನವಿ ಮಾಡಿದರು.

ಕಟ್ಟೆಯಿಂದ ಕಟ್ಟೆಗೆ ಸಂಪರ್ಕ ರಸ್ತೆ ನಿರ್ಮಿಸಿಕೊಡಬೇಕು ಎಂದು ಕಾಮೇಗೌಡ ಸಚಿವರನ್ನು ಕೋರಿದರು. ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.