ADVERTISEMENT

ಮೇಲುಕೋಟೆ ಸಂಭ್ರಮದ ಕಲ್ಯಾಣೋತ್ಸವ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2021, 16:47 IST
Last Updated 21 ಮಾರ್ಚ್ 2021, 16:47 IST
ಕಲ್ಯಾಣಿಯ ಧಾರಾಮಂಟಪದಲ್ಲಿ ಕಲ್ಯಾಣೋತ್ಸವ ನೆರವೇರಿತು
ಕಲ್ಯಾಣಿಯ ಧಾರಾಮಂಟಪದಲ್ಲಿ ಕಲ್ಯಾಣೋತ್ಸವ ನೆರವೇರಿತು   

ಮೇಲುಕೋಟೆ: ವೈರಮುಡಿ ಬ್ರಹ್ಮೋತ್ಸವದ ನಿಮಿತ್ತ ಮಹಾ ವಿಷ್ಣುವಿನಪ್ರಶಸ್ತದಿನಾದ ಶನಿವಾರ ರಾತ್ರಿ ಚೆಲುವನಾರಾಯಣಸ್ವಾಮಿಗೆ ವೈಭವದ ಕಲ್ಯಾಣೋತ್ಸವ ನೆರವೇರಿತು.

ಕಲ್ಯಾಣಿಯ ಧಾರಾಮಂಟಪದಲ್ಲಿ ವೇದಮಂತ್ರ ಪಾರಾಯಣದೊಂದಿಗೆ ಈಶ್ವರ ಸಂಹಿತೆಯ ಪೂಜಾಕೈಂಕರ್ಯ ದಂತೆ ಸಮನ್ಮಾಲೆ, ಊಂಜಲ್ ಸೇವೆ, ಲಾಜಹೋಮ ನೆರವೇರಿಸಿ ದೇಶದ ಏಳಿಗೆಗೆ ಪ್ರಾರ್ಥಿಸಲಾಯಿತು.

ಕಲ್ಯಾಣನಾಯಕಿ ಅಮ್ಮನ ವರೊಂದಿಗೆ ನಡೆದ ಸ್ವಾಮಿಯ ತಿರುಕಲ್ಯಾಣ ಮಹೋತ್ಸವದಲ್ಲಿ ಮಂಡ್ಯಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ ನಾರಾಯಣಗೌಡ ಪಾಲ್ಗೊಂಡು ಸ್ವಾಮಿಯ ಉತ್ಸವಕ್ಕೂ ಹೆಗಲು ನೀಡಿದರು. ನಂತರ ಸಂಪ್ರದಾಯದಂತೆ ನಡೆದ ಸಮನ್ಮಾಲೆಯ ರಾಜಾ ಶೀರ್ವಾದವನ್ನು ಸ್ವೀಕರಿಸಿದರು.

ADVERTISEMENT

ಕಲ್ಯಾಣೋತ್ಸವದಲ್ಲಿ ಪಾಂಡವ ಪುರ ಉಪವಿಭಾಗಾಧಿಕಾರಿ ಶಿವಾ ನಂದಮೂರ್ತಿ, ಪ್ರಮೋದ್ ಪಾಟೀಲ್ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಮಂಗಳಮ್ಮ, ಕಿಯೋನಿಕ್ಸ್ ಸದಸ್ಯ ಮಂಜುನಾಥ್, ಬಿಜೆಪಿ ಮುಖಂಡ ನ್ಯಾಮನಹಳ್ಳಿ ಸೋಮಶೇಖರ್, ಕಾಡೇನಹಳ್ಳಿ ನಾಗಣ್ಣ ಗೌಡ, ಅರಕನಕೆರೆ ಪುರುಷೋತ್ತಮ್ ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಎಸ್.ಎನ್.ಐ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಎಂ.ಜಿ.ಶ್ರೀಧರ್, ಎಂ.ಎನ್.ಗಣೇಶ್ ತಂಡದ ನಾದಸ್ವರವಾದನದೊಂದಿಗೆ ಸ್ವಾಮಿಯ ಉತ್ಸವ ದೇವಾಲಯ ತಲುಪಿ ಕಲ್ಯಾಣೋತ್ಸವ ಸಂಪನ್ನಗೊಂಡಿತು.

ಮೇಲುಕೋಟೆ ಸಮಗ್ರ ಅಭಿವೃದ್ಧಿಗೆ ಬದ್ಧ: ಮೇಲುಕೋಟೆಯನ್ನು ಸಕಲ ಸೌಕರ್ಯ ಹೊಂದಿರುವ ಧಾರ್ಮಿಕ ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಈ ಬಗ್ಗೆ ವಿಶೇಷ ಕಾಳಜಿಹೊಂದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.

ಯತಿರಾಜದಾಸರ್ ಗುರುಪೀಠಕ್ಕೆ ಭೇಟಿ ನೀಡಿದ ಅವರು, ಕಲ್ಯಾಣಿಯ ಸಮುಚ್ಚಯವನ್ನು ಅಭಿವೃದ್ಧಿಪಡಿಸಿದ ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷರಾದ ಸುಧಾಮೂರ್ತಿ ಅವರನ್ನು ಭೇಟಿಯಾಗಿ ಕಲ್ಯಾಣಿ ಸಮುಚ್ಚಯದ ಉಳಿದ ಕಾರ್ಯ, ಮೇಲುಕೋಟೆ ಅಭಿವೃದ್ಧಿಗೆ ಸಹಕರಿಸಲು ಮತ್ತೆ ಆಹ್ವಾನಿಸಲಾಗುವುದು. ದೇವಾಲ ಯಕ್ಕೆ ಸೇರಿದ ಜಮೀನು, ಹೇಮಾವತಿ ವಸತಿಗೃಹ ವಶಕ್ಕೆ ಪಡೆಯಲು ಅಗತ್ಯಕ್ರಮ ವಹಿಸುವಂತೆ ಉಪವಿಭಾಗಾಧಿಕಾರಿಗೆ ಸೂಚಿಸಿದರು.

ಭಕ್ತರಿಗಾಗಿ ವಸತಿಗೃಹಗಳು, ಕಲ್ಯಾಣಮಂಟಪ, ವಾಣಿಜ್ಯಮಳಿಗೆಗಳು ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಬೇಕು. ಕೊಳಗಳು, ಮಂಟಪಗಳು, ಸ್ಮಾರಕಗಳು ಹಾಗೂ ಪರಿಸರವನ್ನು ಸಂರಕ್ಷಿಸಬೇಕು. ಜಾತ್ರಾಮಹೋತ್ಸವ ಮುಗಿಯುತ್ತಿದ್ದಂತೆ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ವಿವಿಧ ಇಲಾಖೆ ಸಚಿವರ ಸಹಕಾರದಲ್ಲಿ ಮೇಲುಕೋಟೆ ಅಭಿವೃದ್ಧಿಪಡಿಸಲಾಗುವುದು ಎಂದರು.

ಇತಿಹಾಸ ತಜ್ಞ ಡಾ.ಶೆಲ್ವಪ್ಪಿಳ್ಳೆ ಅಯ್ಯಂಗಾರ್ ಅವರಿಂದ ಐತಿಹಾಸಿಕ ಮಾಹಿತಿ ಪಡೆದರು.

ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಆನಂದಾಳ್ವಾರ್, ಸಚಿವರ ಆಪ್ತಸಹಾಯಕ ಕಿಕ್ಕೇರಿಕುಮಾರ್ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.