ಪಾಂಡವಪುರ: ‘ತಾಲ್ಲೂಕಿನ ಕನಗನಮರಡಿ ಬಳಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಲ್ಲಿ ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಾಮೀಲಾಗಿದ್ದಾರೆ. ಗಣಿ ಮಾಲೀಕರ ಪರವಾಗಿ ನಿಂತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್.ಎನ್.ರವೀಂದ್ರ ಆರೋಪಿಸಿದರು.
ಪಟ್ಟಣದಲ್ಲಿ ಕನಗನಮರಡಿ ಗ್ರಾಮಸ್ಥರು ಅಕ್ರಮ ಗಣಿಗಾರಿಕೆ ವಿರೋಧಿಸಿ ಮಂಗಳವಾರ ನಡೆಸಿದ ಜೋಡೆತ್ತು ಗಾಡಿ ಮೆರವಣಿಗೆಯಲ್ಲಿ ಮಾತನಾಡಿದರು.
‘ಗಣಿ ಮಾಲೀಕ ಅಶೋಕ ಪಟೇಲ್ ಅವರಿಗೆ ಉಪ ವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಇಲ್ಲಿನ ಘಟನೆಗಳ ಬಗ್ಗೆ ಗೊತ್ತಿದ್ದರೂ ಜಿಲ್ಲಾಧಿಕಾರಿ ಅಶ್ವತಿ ಯಾವ ಕ್ರಮವನ್ನೂ ಕೈಗೊಳ್ಳದೆ ಮೌನವಹಿಸಿದ್ದಾರೆ. ಕೂಡಲೇ ಅಕ್ರಮ ಗಣಿಗಾರಿಕೆಯನ್ನು ತಡೆಯಬೇಕು’ ಎಂದು ಆಗ್ರಹಿಸಿದರು.
‘ಗಣಿಗಾರಿಕೆಯಿಂದ ಮನೆಗಳು ಬಿರುಕು ಬಿಡುತ್ತಿವೆ. ಪರಿಸರ ಹಾಳಾಗುತ್ತಿದೆ.ವನ್ಯಜೀವಿಗಳಿಗೆ ಕಂಟಕ ಎದುರಾಗಿದೆ. ಸಮೀಪದ ವಿ.ಸಿ.ನಾಲೆ ಮೇಲ್ಸೇತುವೆ, ಹುಲ್ಕೆರೆ ಸುರಂಗ ನಾಲಾ ಮಾರ್ಗಕ್ಕೆ ಅಪಾಯವಿದೆ ಎಂದು ನೀರಾವರಿ ಎಂಜಿನಿಯರ್‌ಗಳು ವರದಿ ನೀಡಿದ್ದಾರೆ. ಆದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗಣಿ ಮಾಲೀಕರ ಪರವಾಗಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ಗಮನಕ್ಕೆ ತಾರದೆ ಕಲ್ಲು ಕ್ರಷರ್‌ಗಳಿಗೆ ವಿದ್ಯುತ್ ಪೂರೈಕೆಗೆ ಅನುಮತಿ ನೀಡಿದ್ದಾರೆ’ ಎಂದು ಹರಿಹಾಯ್ದರು.
‘ಕನಗನಮರಡಿ ಗಣಿಗಾರಿಕೆಯನ್ನು ನಿಷೇಧಿಸಬೇಕು ಎಂದು ಕಳೆದ 35 ದಿನಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರೂ ಜಿಲ್ಲಾಧಿಕಾರಿ ನೇತೃತ್ವದ ಟಾಸ್ಕ್ ಫೋರ್ಸ್ ಸಮಿತಿ ಕಣ್ಣುಮುಚ್ಚಿ ಕುಳಿತಿದೆ’ ಎಂದು ದೂರಿದರು.
ಕನಗನಮರಡಿ ಗ್ರಾಮದಿಂದ 25ಕ್ಕೂ ಹೆಚ್ಚು ಎತ್ತಿನಗಾಡಿಗಳ ಮೂಲಕ ಗ್ರಾಮಸ್ಥರು ಮೆರವಣಿಗೆ ನಡೆಸಿ ಮಿನಿ ವಿಧಾನಸೌಧದ ಎದುರು ಜಮಾಯಿಸಿದರು. ಇದರಿಂದ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ಪೊಲೀಸರು ಒಂದು ಕಡೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ರಸ್ತೆಯಲ್ಲಿಯೇ ಕುಳಿತು ಊಟ ಮಾಡಿದರು. ಅಧಿಕಾರಿಗಳು ಸ್ಥಳಕ್ಕೆ ಬಾರದಿದ್ದಾಗ ಮಿನಿ ವಿಧಾನಸೌಧದ ಗೇಟ್ ಬಳಿ ಜಮಾಯಿಸಿದ ಪ್ರತಿಭಟನಕಾರರು ಮುತ್ತಿಗೆ ಹಾಕಿದರು. ಬಳಿಕ ತಹಶೀಲ್ದಾರ್ ಎಸ್.ಎಲ್.ನಯನಾ ಸಮಸ್ಯೆ ಆಲಿಸಿದರು. ಆದರೆ, ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಬರಬೇಕು ಎಂದು ಪಟ್ಟು ಹಿಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ವಾಮಿ, ಸದಸ್ಯ ಕೃಷ್ಣ, ರೈತ ಸಂಘದ ಬಲರಾಮೇಗೌಡ, ಚನ್ನೇಗೌಡ, ಗುರುಮೂರ್ತಿ, ಹೊಸಕೋಟೆ ವಿಜಯಕುಮಾರ್, ದಲಿತ ಮುಖಂಡರಾದ ಕೃಷ್ಣಮೂರ್ತಿ, ಶಾಂತವೀರಸ್ವಾಮಿ, ಕೆಆರ್‌ಎಸ್ ಪಕ್ಷದ ರವಿಕೃಷ್ಣಾರೆಡ್ಡಿ ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.