ADVERTISEMENT

ಕನಕದಾಸರ ಪಾದ ಸ್ಪರ್ಶದಿಂದ ಶ್ರೀರಂಗಪಟ್ಟಣ ಪಾವನ: ರಮೇಶ ಬಂಡಿಸಿದ್ದೇಗೌಡ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 4:20 IST
Last Updated 9 ನವೆಂಬರ್ 2025, 4:20 IST
<div class="paragraphs"><p>ಶ್ರೀರಂಗಪಟ್ಟಣದಲ್ಲಿ ತಾಲ್ಲೂಕು ಆಡಳಿತದಿಂದ ಏರ್ಪಡಿಸಿದ್ದ ಕನಕ ಜಯಂತಿಯಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ ಪಾಲ್ಗೊಂಡು ಮಾತನಾಡಿದರು.</p></div>

ಶ್ರೀರಂಗಪಟ್ಟಣದಲ್ಲಿ ತಾಲ್ಲೂಕು ಆಡಳಿತದಿಂದ ಏರ್ಪಡಿಸಿದ್ದ ಕನಕ ಜಯಂತಿಯಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ ಪಾಲ್ಗೊಂಡು ಮಾತನಾಡಿದರು.

   

ಶ್ರೀರಂಗಪಟ್ಟಣ: ‘ಕನಕದಾಸರು ಕಾವೇರಿ ತೀರದ ಆದಿರಂಗ, ಮಧ್ಯರಂಗ ಮತ್ತು ಅಂತ್ಯರಂಗ ದೇವರ ದರ್ಶನಕ್ಕೆ ಯಾತ್ರಾರ್ಥಿಯಾಗಿ ಆಗಮಿಸಿದ್ದ ಸಂದರ್ಭದಲ್ಲಿ ಪಟ್ಟಣದ ಶ್ರೀರಂಗನಾಥನ ಸನ್ನಿಧಿಯಲ್ಲಿ ನಿಂತು ಹಾಡಿ ಈ ಭೂಮಿಯನ್ನು ಪಾವನಗೊಳಿಸಿದ್ದಾರೆ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಸ್ಮರಿಸಿದರು.

ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಶನಿವಾರ ಏರ್ಪಡಿಸಿದ್ದ ಕನಕ ಜಯಂತಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ADVERTISEMENT

‘ದಾಸ ಶ್ರೇಷ್ಠರಾದ ಕನದಾಸರು ಶ್ರೀರಂಗನಾಥನ ಕುರಿತು ಹಲವು ಕೀರ್ತನೆಗಳನ್ನು ರಚಿಸಿದ್ದಾರೆ. ಪಟ್ಟಣಕ್ಕೆ ಪೂರ್ವ ದಿಕ್ಕಿನಲ್ಲಿರುವ ಮಹದೇವಪುರದ ಬಳಿ, ಕಾವೇರಿ ನದಿಯ ಮಧ್ಯೆ ಬಂಡೆಯ ಮೇಲೆ ಕುಳಿತು ಧ್ಯಾನ ಮಾಡಿದ್ದಾರೆ. ಅವರು ಧ್ಯಾನ ಮಾಡಿದ ಸ್ಥಳ ಕನಕನ ಬಂಡೆ ಎಂದು ಪ್ರಸಿದ್ಧಿಯಾಗಿದೆ. ಈ ತಾಣವನ್ನು ಸರ್ಕಾರ ಪ್ರವಾಸಿ ತಾಣಗಳ ಪಟ್ಟಿಗೆ ಸೇರಿಸಿರುವುದು ಸಂತಸದ ಸಂಗತಿ. ರಾಮಧಾನ್ಯ ಚರಿತೆ, ನಳಚರಿತ್ರೆ. ಹರಿಭಕ್ತ ಸಾರ ಇತರ ಪ್ರಮುಖ ಕೃತಿಗಳನ್ನು ಅವರು ರಚಿಸಿದ್ದು ಜಾತಿ, ಕುಲಗಳ ಹೆಸರಿನಲ್ಲಿ ಸಮಾಜ ಒಡೆಯುವುದನ್ನು 16ನೇ ಶತಮಾನದಲ್ಲೇ ವಿರೋಧಿಸಿದ್ದಾರೆ. ಅವರ ಸಂದೇಶಗಳನ್ನು ಅನುಸರಿಸುವ ಮೂಲಕ ಗೌರವ ಸಲ್ಲಿಸಬೇಕು’ ಎಂದು ಹೇಳಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಲಿಂಗು ಮಾತನಾಡಿ, ‘ಕನಕದಾಸರ ಕೀರ್ತನೆಗಳು ಸಮ ಸಮಾಜದ ಆಶಯವನ್ನು ಹೊಂದಿವೆ. ಮೇಲು, ಕೀಳು ಎಂಬ ಭಾವನೆ ಇರಕೂಡದು ಎಂದು ಹೇಳಿದ್ದಾರೆ. ಉಡುಪಿಯ ಶ್ರೀಕೃಷ್ಣನ ದರ್ಶನಕ್ಕೆ ಶೂದ್ರರಿಗೆ ಅವಕಾಶ ನೀಡದ ವರ್ಣಾಶ್ರಮ ಪದ್ಧತಿಗೆ ಸಾತ್ವಿಕ ಮಾರ್ಗದಲ್ಲಿ ವಿರೋಧ ವ್ಯಕ್ತಪಡಿಸಿರುವುದು ಕನಕದಾಸರ ವೈಚಾರಿಕತೆ ಕನ್ನಡಿ ಹಿಡಿದಿದೆ’ ಎಂದರು.

ತಹಶೀಲ್ದಾರ್‌ ಚೇತನಾ ಯಾದವ್ ಮಾತನಾಡಿದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎ.ಬಿ. ವೇಣು, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೆಶಕ ಪ್ರದೀಪ್‌ಕುಮಾರ್‌, ಬಿಸಿಎಂ ಅಧಿಕಾರಿ ಪುಷ್ಪಾ, ರೇಷ್ಮೆ ಇಲಾಖೆ ಅಧಿಕಾರಿ ಕೃಷ್ಣ, ಕರವೇ ಮುಖಂಡ ಸಿ.ಸ್ವಾಮಿಗೌಡ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಗಂಜಾಂ ರವಿಚಂದ್ರ, ಸಂಚಾಲಕ ಕುಬೇರಪ್ಪ, ಭಾರತೀಯ ಬೌದ್ಧ ಮಹಾಸಭಾ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಕೆ.ಟಿ.ರಂಗಯ್ಯ, ಅಗ್ನಿಶಾಮಕ ಠಾಣಾಧಿಕಾರಿ ಅಂಬರೀಶ್ ಉಪ್ಪಾರ್, ಕಂದಾಯ ನಿರೀಕ್ಷಕ ಟಿ.ಪಿ.ರೇವಣ್ಣ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.