
ಮಂಡ್ಯ: ರಾಜ್ಯದಲ್ಲಿಯೇ ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಕನ್ನಡ ಭಾಷೆ ಮಾತನಾಡುವವರ ಸಂಖ್ಯೆಯಿರುವುದು ಹೆಮ್ಮೆಯ ವಿಷಯ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2 ಸಾವಿರ ವರ್ಷಗಳ ಪ್ರಾಚೀನ ಇತಿಹಾಸವಿರುವ ಹಾಗೂ ಪ್ರಪಂಚದಲ್ಲಿ ಅತ್ಯಂತ ಸರಳ, ಸುಂದರ ಹಾಗೂ ಅರ್ಥಗರ್ಭಿತ ಭಾಷೆ ಎಂದರೆ ಅದು ಕನ್ನಡ ಭಾಷೆಯಾಗಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನಾ ಸಾವಿರಾರು ವಿದ್ಯಾರ್ಥಿಗಳು ನಗರದ ಉಗ್ರನರಸಿಂಹಸ್ವಾಮಿ ದೇಗುಲದ ಆವರಣದಿಂದ ವಿವಿಧ ಜಾನಪದ ಕಲಾ ಪ್ರಕಾರಗಳೊಂದಿದೆ ತಾಯಿಭುವನೇಶ್ವರಿ ಭಾವಚಿತ್ರವನ್ನು ತೆರೆದ ವಾಹನದಲ್ಲಿಟ್ಟು ಕ್ರೀಡಾಂಗಣದವರೆಗೆ ಮೆರವಣಿಗೆ ನಡೆಸಲಾಯಿತು.
ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.
ಸನ್ಮಾನ: ಕಾರ್ಯಕ್ರಮದ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರನ್ನು ಸನ್ಮಾನಿಸಲಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಎಸ್.ಕೆ.ನಾಗೇಶ್, ಕೃಷಿ ಕ್ಷೇತ್ರದಿಂದ ರಾಮಲಿಂಗಯ್ಯ, ಕುಂಡಯ್ಯ, ರಂಗಭೂಮಿ ಕ್ಷೇತ್ರದಿಂದ ಬಿ.ಎನ್.ಸುನೀಲ್ ಕುಮಾರ್, ಶಿಕ್ಷಣ ಕ್ಷೇತ್ರದಿಂದ ಎಂ.ಎಸ್.ರಾಜಶೇಖರ, ಸಮಾಜ ಸೇವೆ ಕ್ಷೇತ್ರದಿಂದ ಕೆ.ಸಿ.ರಾಘವೇಂದ್ರ ಕಬ್ಬಾರೆ, ಸಂಘಟನೆ ಕ್ಷೇತ್ರದಿಂದ ಎಂ.ಸಿ.ರವಿಕುಮಾರ್ ಅವರನ್ನು ಗೌರವಿಸಲಾಯಿತು.
ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಧ್ವಜಾರೋಹಣ ನೆರವೇರಿಸಿದರು. ಉಪ ಪ್ರಾಂಶುಪಾಲೆ ನಂದಿನಿ ಕನ್ನಡ ರಾಜ್ಯೋತ್ಸವ ಕುರಿತು ವಿಶೇಷ ಉಪನ್ಯಾಸ ನೀಡಿದರು.
ತಾ.ಪಂ ಇಒ ರಾಮಲಿಂಗಯ್ಯ, ಬಿಇಒ ಧನಂಜಯ, ಆರಕ್ಷಕ ವೃತ್ತ ನಿರೀಕ್ಷಕ ನಾರಾಯಿಣಿ, ತಾಲ್ಲೂಕು ಮಟ್ಟದ ಆಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.