ADVERTISEMENT

ಕೆ.ಆರ್.ಪೇಟೆ| ಸಾಹಿತ್ಯ ಭವನ ನಿರ್ಮಾಣಕ್ಕೆ ನಿವೇಶನ: ಶಾಸಕ ಎಚ್.ಟಿ.ಮಂಜು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 2:51 IST
Last Updated 10 ನವೆಂಬರ್ 2025, 2:51 IST
ಕೆ.ಆರ್.ಪೇಟೆ ಪಟ್ಟಣದ ಛಾಯಾದೇವಿ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕವು ಆಯೋಜಿಸಿದ್ದ 37ನೇ ವರ್ಷದ ಶಾಲೆಗೊಂದು ಕಾರ್ಯಕ್ರಮವನ್ನು ಶಾಸಕ ಎಚ್.ಟಿ.ಮಂಜು ಉದ್ಘಾಟಿಸಿದರು
ಕೆ.ಆರ್.ಪೇಟೆ ಪಟ್ಟಣದ ಛಾಯಾದೇವಿ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕವು ಆಯೋಜಿಸಿದ್ದ 37ನೇ ವರ್ಷದ ಶಾಲೆಗೊಂದು ಕಾರ್ಯಕ್ರಮವನ್ನು ಶಾಸಕ ಎಚ್.ಟಿ.ಮಂಜು ಉದ್ಘಾಟಿಸಿದರು   

ಕೆ.ಆರ್.ಪೇಟೆ: ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ತಾಲ್ಲೂಕು ಕೇಂದ್ರದಲ್ಲಿ ಸಾಹಿತ್ಯ ಭವನ ನಿರ್ಮಾಣಕ್ಕೆ ಸೂಕ್ತ ನಿವೇಶನ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಎಚ್.ಟಿ. ಮಂಜು ಹೇಳಿದರು.

ಪಟ್ಟಣದ ಹೊರವಲಯದ ಪುರ ಗೇಟ್ ಬಳಿ ಇರುವ ಛಾಯಾದೇವಿ ಶಿಕ್ಷಣ ಸಂಸ್ಥೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ 37ನೇ ವರ್ಷದ ಶಾಲೆಗೊಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡದ ಕೆಲಸಕ್ಕೆ ಮೊದಲ ಆದ್ಯತೆ ನೀಡಬೇಕೆಂಬುದು ನನ್ನ ಸಂಕಲ್ಪವಾಗಿದ್ದು, ಪರಿಷತ್ತಿನ ಬಹುದಿನಗಳ ಕನಸಾದ ಕನ್ನಡ ಭವನ ನಿರ್ಮಾಣಕ್ಕೆ ಸೂಕ್ತ ಸ್ಥಳದಲ್ಲಿ ನಿವೇಶನವನ್ನು ಒದಗಿಸಿಕೊಟ್ಟು ಭವ್ಯ ಭವನ ನಿರ್ಮಾಣಕ್ಕೆ ಕೈ ಜೋಡಿಸುವದಾಗಿ ಭರವಸೆ ನೀಡಿದರು. ಕಳೆದ 37 ವರ್ಷಗಳಿಂದ ನಿರಂತರವಾಗಿ ಪ್ರತಿವರ್ಷ ನವಂಬರ್ ತಿಂಗಳಲ್ಲಿ ತಾಲ್ಲೂಕಿನ ಪ್ರೌಢಶಾಲೆಗಳಲ್ಲಿ ಶಾಲೆಗೊಂದು ಕಾರ್ಯಕ್ರಮ ಹಮ್ಮಿಕೊಂಡು ನಾಡಿನ ಹಿರಿಯ ಸಾಹಿತಿಗಳನ್ನು ಪರಿಚಯಿಸುವ ಕೆಲಸವನ್ನು ನಡೆಸಿಕೊಂಡು ಬಂದಿದೆ. ಈ ವರ್ಷ ಖ್ಯಾತ ಕಾದಂಬರಿಕಾರ ಎಸ್.ಎಲ್ ಭೈರಪ್ಪ ನೆನಪು ಕಾರ್ಯಕ್ರಮ ನಡೆಸುತ್ತಿರುವದು ಶ್ಲಾಘನೀಯ ಎಂದರು.

ADVERTISEMENT

ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕಿ ಮೀರಾ ಶಿವಲಿಂಗಯ್ಯ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲ್ಲೂಕು ಸಾಹಿತಿಗಳ ಬೀಡಾಗಿದ್ದು ಅವರ ಬದುಕು ಮತ್ತು ಬರಹ ಕುರಿತಂತೆ ಶಾಲಾ ವಿದ್ಯಾರ್ಥಿಗಳಿಗೆ ಹೇಳಿಕೊಡುವದರೊಂದಿಗೆ ನಮ್ಮ ನೆಲ-ಜಲ, ನಾಡು ಮತ್ತು ನುಡಿಯ ಬಗ್ಗೆ ಜ್ಞಾನ ಹೆಚ್ಚಿಸುವ,ಅಭಿಮಾನ ಮೂಡಿಸುವ ಕಾಯಕ ನಿರಂತರವಾಗಿ ನಡೆಸಲು ಸೂಚಿಸಿದರು.

ಸಾಹಿತಿ ಶಿ.ಕುಮಾರಸ್ವಾಮಿ ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಹಿತಿ ಕೆ.ಅಣ್ಣೇಗೌಡ ಅವರು ರಚಿಸಿರುವ ಭಾರತ ಚೈತ್ರ ಪುಸ್ತಕವನ್ನು ಮಂಡ್ಯ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹರ್ಷ ಪಣ್ಣೆದೊಡ್ಡಿ ಬಿಡುಗಡೆ ಮಾಡಿದರು.

ಛಾಯಾದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಭಾನು ಪ್ರಕಾಶ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಕೆ.ಕಾಳೇಗೌಡ, ಕೆ.ಎಸ್.ಸೋಮಶೇಖರ್, ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ರಮೇಶ್, ಕೃತಿಯ ಲೇಖಕ ಕೆ.ಅಣ್ಣೇಗೌಡ , ಪ್ರಮುಖರಾದ ಚಾ.ಶಿ. ಜಯಕುಮಾರ್, ಡಿ.ರಾಜೇಗೌಡ, ತಾಲ್ಲೂಕು ಲಕ್ಷ್ಮಣಗೌಡ, ಎಸ್.ಎಲ್.ಧರ್ಮಪ್ಪ, ಚಂದ್ರಪ್ಪ, ವಿಜಿ ನಾರಾಯಣ್, ಕಟ್ಟೆ ಮಹೇಶ್, ಎಸ್.ಎನ್.ಮಂಜೇಗೌಡ, ಆರ್. ಶ್ರೀನಿವಾಸ್, ಚನ್ನೇಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.