ಮಂಡ್ಯ: ‘ಮಂಡ್ಯ ಜಿಲ್ಲೆಯ ಇತಿಹಾಸವು ಗಂಗರು, ರಾಷ್ಟ್ರಕೂಟರು, ಚೋಳರು, ಹೊಯ್ಸಳ ಅರಸರ ಆಳ್ವಿಕೆಯನ್ನು ಒಳಗೊಂಡಿದೆ. ಮಂಡ್ಯದ ಇತಿಹಾಸ ಹಾಗೂ ಅಭಿಜಾತ ಸಾಹಿತ್ಯವು ಚಿಕ್ಕದೇವರಾಜ ಒಡೆಯರ್ ಕಾಲದಲ್ಲಿ ಪುನರುತ್ಥಾನವಾಯಿತು’ ಎಂದು ವಿದ್ವಾಂಸ ಟಿ.ವಿ. ವೆಂಕಟಾಚಲಶಾಸ್ತ್ರೀ ಬಣ್ಣಿಸಿದರು.
ನಗರದ ಕೆ.ವಿ.ಎಸ್. ಭವನದಲ್ಲಿ ಕರ್ನಾಟಕ ಸಂಘದ ವತಿಯಿಂದ ಮಂಗಳವಾರ ನಡೆದ ಎರಡನೇ ವರ್ಷದ ಹ.ಕ. ರಾಜೇಗೌಡ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಮಂಡ್ಯದ ವಿಚಾರದಲ್ಲಿ ಒಂದು ಮಾತು ಹೇಳುವುದಾದರೆ ‘ಮಂಡ್ಯ ಮಾಹಿತಿ ಮಹಾಮನೆ’ ಅಥವಾ ದಾಖಲಾತಿ ಭಂಡಾರ ಆಗಬೇಕಿದ್ದು, ಇದಕ್ಕೆ ಚುಂಚಶ್ರೀಗಳು, ಪ್ರೊ.ಜಯಪ್ರಕಾಶಗೌಡ ಸೇರಿದಂತೆ ಅಪಾರ ಕನ್ನಡ ಬಂಧುಗಳು ಶ್ರಮಿಸಿ ವಿಷಯಗಳನ್ನು ಸಂಗ್ರಹಿಸುವ ಕೆಲಸವಾಗಬೇಕು.
ಆದಿಚುಂಚನಗಿರಿ ಮಠ ಸಂಸ್ಥಾನದ ಬಳಿ ಇರುವ ಬೆಳ್ಳೂರು, ನಾಗಮಂಗಲ, ಮಂಡ್ಯ ಕೀಲಾರ ಸೇರಿದಂತೆ ಹಲವು ಗ್ರಾಮಗಳನ್ನು ನೋಡಿದರೆ ಮಹಾನಾಯಕರು ಇರುವುದು ಕಂಡು ಬರುತ್ತದೆ. ಮುಖ್ಯವಾಗಿ ಬಿ.ಎಂ. ಶ್ರೀಕಂಠಯ್ಯ ಅವರು ‘ಆಧುನಿಕ ಕಣ್ವ’ ಎಂದೇ ಖ್ಯಾತಿ ಆಗಿರುವುದನ್ನು ನೋಡಬಹುದು. ಇವರು ಅಚ್ಚ ಕನ್ನಡ ಹಾಗೂ ಸಂಸ್ಕೃತ ತಿಳಿಸಿರುವುದನ್ನು ನಾವು ಕಾಣುತ್ತೇವೆ. ಜೊತೆಗೆ ಬಿಎಂಶ್ರೀ ಅವರು ಆಧುನಿಕ ಕವಿಗಳು ಹೌದು ಎಂದು ಶ್ಲಾಘಿಸಿದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ‘ಯಾವುದೇ ವ್ಯಕ್ತಿಯು ದೇಹಕ್ಕಿಂತ ಮನಸ್ಸಿಗೆ ಸ್ನಾನ ಮಾಡುವುದು ಮುಖ್ಯವಾಗಬೇಕು. ಏಕೆಂದರೆ ಆ ವ್ಯಕ್ತಿಯ ಜೊತೆ ಸಂವಾದ ಸರಿ ಇರುತ್ತದೆ. ಇಲ್ಲವಾದರೆ ಗೊಂದಲಮಯವಾಗಿರುತ್ತದೆ. ಸಮಾಜದಲ್ಲಿ ಸ್ನಾನ ಎಂದರೆ ಏನೆಂಬುದನ್ನು ಪ್ರಶ್ನಿಸುವ ಮನಸುಗಳು ಇವೆ ಎಂದರು.
ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮಿಜಿ, ಸಾಹಿತಿ ರಾಗೌ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಮೈಸೂರಿನ ವಿಶ್ರಾಂತ ಕುಲಪತಿಗಳಾದ ಡಾ.ಪದ್ಮಾ ಶೇಖರ್, ಹ.ಕ. ರಾಜೇಗೌಡರವರ ಸುಪುತ್ರ ಎಚ್.ಆರ್. ದಿನೇಶ್‌ಚಂದ್ರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.