ADVERTISEMENT

ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಕನ್ನಡ ಭವನ: ₹2.18 ಕೋಟಿ ಬಳಕೆಗೆ ಅನುಮತಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 13:59 IST
Last Updated 18 ಜೂನ್ 2025, 13:59 IST
   

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿವಿಧ ಮೂಲಗಳಿಂದ ಸಂಗ್ರಹ ಮಾಡಿಕೊಂಡು ಬಳಕೆಯಾಗದೇ ಉಳಿದಿದ್ದ ₹2.18 ಕೋಟಿಯನ್ನು ಸಮ್ಮೇಳನದ ಸವಿನೆನಪಿಗಾಗಿ ‘ಕನ್ನಡ ಭವನ’ ನಿರ್ಮಿಸಲು ಬಳಕೆ ಮಾಡಿಕೊಳ್ಳಲು ಷರತ್ತುಗಳೊಂದಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. 

ಅನುಮತಿ ನೀಡಿರುವ ಉದ್ದೇಶಕ್ಕೇ ಬಳಸಬೇಕು, ಅಂದಾಜು ವೆಚ್ಚ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಪಡೆದು ಸರ್ಕಾರಕ್ಕೆ ಸಲ್ಲಿಸಬೇಕು. ಸರ್ಕಾರ ಹೊರಡಿಸುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಕಾಮಗಾರಿಯನ್ನು ಅನುದಾನದ ಮಿತಿಯಲ್ಲಿಯೇ ಅನುಷ್ಠಾನಗೊಳಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್‌. ಗೀತಾಬಾಯಿ ಆದೇಶದಲ್ಲಿ ತಿಳಿಸಿದ್ದಾರೆ. 

ಸಮ್ಮೇಳನಕ್ಕೆ ರಾಜ್ಯ ಸರ್ಕಾರ ಮೂರು ಕಂತುಗಳಲ್ಲಿ ₹30 ಕೋಟಿ ಅನುದಾನ ನೀಡಿತ್ತು. ಮಳಿಗೆಗಳು, ಪ್ರತಿನಿಧಿಗಳ ನೋಂದಣಿ ಶುಲ್ಕ ಹಾಗೂ ಎಚ್‌ಆರ್‌ಎಂಎಸ್‌ ನೌಕರರನ್ನು ಹೊರತುಪಡಿಸಿ ಸರ್ಕಾರಿ ನೌಕರರ ಒಂದು ದಿನದ ವೇತನದ ದೇಣಿಗೆ ಹಾಗೂ ಇತರೆ ದೇಣಿಗೆಗಳಿಂದ ಸಂಗ್ರಹಿಸಿದ್ದ ₹2.18 ಕೋಟಿ ಉಳಿಕೆಯಾಗಿತ್ತು. ಈ ಹಣವನ್ನು ಕನ್ನಡ ಭವನ ನಿರ್ಮಾಣಕ್ಕೆ ಬಳಸಿಕೊಳ್ಳಲು ಅನುಮತಿ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಸರ್ಕಾರವನ್ನು ಕೋರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.