ADVERTISEMENT

ತ್ರಿಭಾಷಾ ಸೂತ್ರ | ಯುವ ತಲೆಮಾರಿಗೆ ಸವಾಲು: ಎಚ್‌.ಡಿ.ಕುಮಾರಸ್ವಾಮಿ ಅಭಿಮತ

ವಿಕ್ರಂ ಕಾಂತಿಕೆರೆ
Published 23 ಡಿಸೆಂಬರ್ 2024, 5:13 IST
Last Updated 23 ಡಿಸೆಂಬರ್ 2024, 5:13 IST
<div class="paragraphs"><p>ಎಚ್‌.ಡಿ.ಕುಮಾರಸ್ವಾಮಿ</p></div>

ಎಚ್‌.ಡಿ.ಕುಮಾರಸ್ವಾಮಿ

   

ಮಂಡ್ಯ (ರಾಜಮಾತೆ ಕೆಂಪನಂಜಮ್ಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆ): ತ್ರಿಭಾಷಾ ಸೂತ್ರವನ್ನು ಅಳವಡಿಸುವುದರಿಂದ ಯುವ ಸಮುದಾಯ, ವಿಶೇಷವಾಗಿ ಗ್ರಾಮೀಣ ಭಾಗದ ಜನರು ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು ವೈಯಕ್ತಿಕ ಬದುಕು ಮತ್ತು ಭಾಷೆ ಉಳಿಸುವ ಕಾರ್ಯದಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ವಿಷಯದಲ್ಲಿ ಕರ್ನಾಟಕದ ಯುವಸಮುದಾಯದಲ್ಲಿ ಗೊಂದಲವಿದೆ. ಹೀಗಾಗಿ ಭಾಷಾ ಹೇರಿಕೆಯ ಕುರಿತು ಸಮ್ಮೇಳನದ ಅಧ್ಯಕ್ಷರು ವ್ಯಕ್ತಪಡಿಸಿದ ಕಾಳಜಿ ಗಮನಾರ್ಹ ಎಂದರು. 

ADVERTISEMENT

ವೈಭೋಗದ ವಸ್ತುಗಳು ಈಗ ಸಾಕಷ್ಟು ಇವೆ. ಆದರೆ ಬದುಕಿನಲ್ಲಿ ಶಾಂತಿ ಇಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಗಂಭೀರ ಆಗಲಿದೆ. ಬಾಂಧವ್ಯ, ಸಂಸ್ಕೃತಿ, ಭಾಷೆ ಮತ್ತು ನಾಡು ಉಳಿಸಲು ಸಾಹಿತ್ಯ‌ ನೆರವಾಗಬೇಕು ಎಂದು ಅವರು ಹೇಳಿದರು.

‘ಕನ್ನಡ ಸಿನಿಮಾಗಳಲ್ಲಿ ಕಂಡುಬರುತ್ತಿರುವ ಕಥೆಗಳು ಸಮಾಜವನ್ನು ಯಾವ ಕಡೆಗೆ ಕೊಂಡೊಯ್ಯಬಲ್ಲುದು ಎಂಬ ಬಗ್ಗೆ ಗಂಭೀರ ಚಿಂತನೆ ಆಗಬೇಕಿದೆ’ ಎಂದು ಹೇಳಿದ ಅವರು ಕರ್ನಾಟಕದಲ್ಲಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಆದಿಚುಂಚನಗಿರಿ ಸಂಸ್ಥಾನಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ ಸೃಷ್ಟಿಯ  ವಿಕಾಸದಲ್ಲಿ ಮಹತ್ವದ್ದು ಭಾಷೆ ಎಂದರು.

ಕುವೆಂಪು ಅವರ ಸಾಹಿತ್ಯ ಆರಂಭಗೊಂಡದ್ದು ಇಂಗ್ಲಿಷ್‌ನಲ್ಲಿ. ಮೊದಲ ರಚನೆಯನ್ನು ಜೇಮ್ಸ್‌ ಕಸಿನ್ ಎಂಬವರಿಗೆ ತೋರಿಸಿದಾಗ ಅವರು ‘ನಿನ್ನದೇ ಭಾಷೆಯಲ್ಲಿ ಬರೆಯಲು ಪ್ರಯತ್ನಿಸು’ ಎಂದು ಸೂಚಿಸಿದ್ದರಂತೆ. ನಂತರ ಕುವೆಂಪು ಬೆಳೆದ ಪರಿ ವಿಶಿಷ್ಟ. ಭಾಷೆಯನ್ನು ಮರೆತರೆ ಅಸ್ತಿತ್ವವೇ ಇಲ್ಲದಾಗುತ್ತದೆ. ಕನ್ನಡವು ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮುಂದುವರಿಯುತ್ತಿದ್ದು ಈ ಭಾಷೆಗೆ ಚ್ಯುತಿ ಇಲ್ಲ ಎಂದು ಅವರು ಹೇಳಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ ಬೆಂಗಳೂರಿನಲ್ಲಿ ಶೇಕಡ 23ರಷ್ಟು ಕನ್ನಡಿಗರು ಮಾತ್ರ ಇರುವುದು ಕಳವಳದ ಸಂಗತಿ ಎಂದರು.

ಸಮಾರೋಪ ಭಾಷಣ ಮಾಡಿದ ಸಾಹಿತಿ ಸಿ.ಪಿ.ಕೃಷ್ಣ ಕುಮಾರ್ ಕನ್ನಡವು ಸಮಷ್ಠಿ ಬದುಕಿಗಾಗಿ ಇರಬೇಕು, ಕರ್ನಾಟಕದಲ್ಲಿ ಕನ್ನಡ ಭಾಷೆ ಸಾಮ್ರಾಟ ಆಗಬೇಕು‌. ಆದರೆ ಹಾಗೆ ಆಗಿಲ್ಲ. ಈ ಪರಿಸ್ಥಿತಿ ಮುಂದುವರಿದರೆ ಇಲ್ಲಿ ಕನ್ನಡವನ್ನು ಹುಡುಕಬೇಕಾದೀತು ಎಂದರು.

ತುಮಕೂರು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಗೌರಿಗದ್ದೆ ಆಶ್ರಮದ ವಿನಯ ಗುರೂಜಿ, ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ಕಸಾಪ ಅಧ್ಯಕ್ಷ ಮಹೇಶ್ ಜೋಶಿ, ಲೋಕಪಾಲ್ ಸದಸ್ಯ ನ್ಯಾಯಮೂರ್ತಿ ನಾರಾಯಣಸ್ವಾಮಿ, ಹಾವೇರಿ ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ, ಶಾಸಕರಾದ ನರೇಂದ್ರಸ್ವಾಮಿ, ಮಧು ಮಾದೇಗೌಡ, ದಿನೇಶ್ ಗೂಳಿಗೌಡ, ಕೆ.ಎಂ.ಉದಯ, ಎಚ್.ಟಿ.ಮಂಜುನಾಥ್, ದರ್ಶನ್ ಪುಟ್ಟಣ್ಣಯ್ಯ, ವಿವೇಕಾನಂದ, ಮುಖಂಡ ಪುಟ್ಟರಾಜು, ಡಿ.ಸಿ ತಮ್ಮಣ್ಣ, ಅಂದಾನಿ, ಶ್ರೀಕಂಠೇಗೌಡ, ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ, ಮನ್‌ಮುಲ್ ಅಧ್ಯಕ್ಷ ಬೋರೇಗೌಡ, ಸಾಹಿತಿ ಪುಟ್ಟೇಗೌಡ, ಕಸಾಪ ಜಿಲ್ಲಾ ಘಟಕದ ಸಂಚಾಲಕಿ ಮೀರಾ ಶಿವಲಿಂಗಯ್ಯ, ನಗರಸಭೆ ಉಪಾಧ್ಯಕ್ಷ ಎಂ.ಪಿ ಅರುಣ್ ಕುಮಾರ್, ಜಿಲ್ಲಾಧಿಕಾರಿ ಕುಮಾರ್, ಮುಡಾ ಆಯುಕ್ತ ಶ್ರೀನಿವಾಸ್, ಬೂದನೂರು ಗ್ರಾ.ಪಂ.ಅಧ್ಯಕ್ಷೆ ಮಾನಸ, ಬೇಲೂರು ಗ್ರಾ‌.ಪಂ.ಅಧ್ಯಕ್ಷೆ ಸುವರ್ಣಾವತಿ, ಉಮ್ಮಡಹಳ್ಳಿ ಗ್ರಾ.ಪಂ.ಅಧ್ಯಕ್ಷ ಶ್ರೀಕಾಂತ್ ಇದ್ದರು.

ಶಂಕರ ಪ್ರಸಾದ್ ಮತ್ತು ಭಾನುಮತಿ ನಿರೂಪಿಸಿದರು.‌ ನೆ.ಭಾ.ರಾಮಲಿಂಗ ಶೆಟ್ಟಿ ಸ್ವಾಗತಿಸಿದರು.

ಪೊಲೀಸ್ ವಶದಲ್ಲಿ 3 ದಿನ!
ಸಮ್ಮೇಳನದ ಯಶಸ್ಸಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಅವರು ‘ಪೊಲೀಸರು ಯಾವುದೇ ಸಮಸ್ಯೆ ಆಗದಂತೆ ಕೆಲಸ ಮಾಡಿದ್ದಾರೆ. ನಾನು ಮೂರು ದಿನ ಅವರ ವಶದಲ್ಲೇ ಇದ್ದೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು. ಸಾಹಿತ್ಯ ಸಮ್ಮೇಳನಗಳಲ್ಲಿ ಸಾಮಾನ್ಯವಾಗಿ ಊಟ ಮತ್ತು ವಸತಿಯ ಬಗ್ಗೆ ದೂರುಗಳು ಕೇಳಿಬರುವುದುಂಟು. ಈ ಸಮ್ಮೇಳನದಲ್ಲಿ ಅಂಥ ಸಮಸ್ಯೆ ಆಗಲಿಲ್ಲ ಎಂದ ಅವರು ಸಾಹಿತ್ಯ ಮತ್ತು ಸಂಸ್ಕೃತಿಯ ಸಂಗಮ‌ ಆಗಬೇಕಾದದ್ದು ಇಂದಿನ ಅಗತ್ಯ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.