ADVERTISEMENT

ಮಂಡ್ಯ: ನುಡಿಜಾತ್ರೆ ‘ಸ್ಮರಣ ಸಂಚಿಕೆ’ ಬಿಡುಗಡೆಗೆ ಗ್ರಹಣ

ಸಿದ್ದು ಆರ್.ಜಿ.ಹಳ್ಳಿ
Published 3 ಮೇ 2025, 3:55 IST
Last Updated 3 ಮೇ 2025, 3:55 IST
87ನೇ ನುಡಿಜಾತ್ರೆಯ ಲಾಂಛನ
87ನೇ ನುಡಿಜಾತ್ರೆಯ ಲಾಂಛನ   

ಮಂಡ್ಯ: ನಗರದಲ್ಲಿ ನಡೆದಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹೊರತರಬೇಕಿದ್ದ ‘ಬೆಲ್ಲದಾರತಿ’ ಸ್ಮರಣ ಸಂಚಿಕೆಯು, ನಾಲ್ಕು ತಿಂಗಳಾದರೂ ಬಿಡುಗಡೆಯಾಗಿಲ್ಲ.

ಹಿಂದಿನ ವರ್ಷ ಡಿಸೆಂಬರ್‌ 20, 21 ಮತ್ತು 22ರಂದು ನಡೆದ ಸಮ್ಮೇಳನದ ಅಂಗವಾಗಿ ನಾಡು–ನುಡಿ ಹಾಗೂ ಮಂಡ್ಯ ಜಿಲ್ಲೆಯ ಸಾಹಿತ್ಯ–ಸಂಸ್ಕೃತಿಯ ಕುರಿತ ಲೇಖನಗಳುಳ್ಳ ಸಂಚಿಕೆಯನ್ನು ರೂಪಿಸಲು 27 ಸದಸ್ಯರ ಸಮಿತಿ ರಚಿಸಲಾಗಿತ್ತು.

ವಿವಿಧ ಲೇಖಕರ 132 ಲೇಖನಗಳನ್ನು ಒಳಗೊಂಡ 820 ಪುಟಗಳ ಸಂಚಿಕೆಗೆ ₹20 ಲಕ್ಷ ಅನುದಾನವನ್ನೂ ಮೀಸಲಿಡಲಾಗಿತ್ತು. 2 ಸಾವಿರ ಪ್ರತಿಗಳನ್ನು ಮುದ್ರಿಸಿ ಬಿಡುಗಡೆಗೊಳಿಸುವ ಗುರಿ ಇತ್ತು. ಆದರೆ, ಇದುವರೆಗೆ ಸಂಚಿಕೆ ಬಿಡುಗಡೆಯಾಗದಿರುವುದಕ್ಕೆ ಜಿಲ್ಲೆಯ ಸಾಹಿತಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. 

ADVERTISEMENT

ಭಾವಚಿತ್ರ ಕಳುಹಿಸಿಲ್ಲ: ‘ಹಲವು ಬಾರಿ ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರಿಗೆ ಪತ್ರ ಬರೆದರೂ, ದೂರವಾಣಿ ಮೂಲಕ ಮನವಿ ಮಾಡಿದರೂ, ಕೇಂದ್ರ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರ ಭಾವಚಿತ್ರಗಳನ್ನು ಕಳುಹಿಸಿಲ್ಲ. ಹೀಗಾಗಿ ಸಂಚಿಕೆ ಮುದ್ರಣ ನನೆಗುದಿಗೆ ಬಿದ್ದಿದೆ’ ಎನ್ನುತ್ತಾರೆ ಸಂಚಿಕೆ ಸಮಿತಿಯ ಸದಸ್ಯರು.

‘ಆಶೀರ್ವಚನ– ಸಂದೇಶಗಳು, ಪ್ರಾಸ್ತಾವಿಕ ನುಡಿಗಳು, ಸಮ್ಮೇಳನಾಧ್ಯಕ್ಷರ ಭಾಷಣ, ಮಂಡ್ಯದಲ್ಲಿ ನಡೆದ 48ನೇ ಮತ್ತು 63ನೇ ಸಮ್ಮೇಳನಗಳ ನೆನಪು, ಮಧುರ ಮಂಡ್ಯ, ಮಂಡ್ಯ ಕರ್ನಾಟಕ ಭಾರತ, ವಿಶ್ವ ಕರ್ನಾಟಕ, ಅಭಿವೃದ್ಧಿ ಭಾರತ, ಚಿತ್ರ ಸಂಪುಟ, ಸಮ್ಮೇಳನದ ಭಾವಚಿತ್ರಗಳು ಮತ್ತು ಅನುಬಂಧಗಳು ಎಂಬ 10 ಭಾಗಗಳಲ್ಲಿ ಸಂಚಿಕೆಯನ್ನು ರೂಪಿಸಲಾಗಿದೆ. ಲೇಖನಗಳು ಮತ್ತು ಚಿತ್ರಗಳನ್ನು ಸಂಗ್ರಹಿಸಿ, ಪುಟ ವಿನ್ಯಾಸವೂ ಮುಗಿದಿದೆ’ ಎನ್ನುತ್ತಾರೆ ಸಂಚಿಕೆಯ ಸದಸ್ಯ ಕಾರ್ಯದರ್ಶಿ ಕೃಷ್ಣಮೂರ್ತಿ. 

ಗೌರವಧನ ನೀಡಿಲ್ಲ: ‘ಸಂಚಿಕೆಗೆ ಲೇಖನ ಕೊಟ್ಟ ಬರಹಗಾರರಿಗೆ ಗೌರವಧನ ನೀಡಿಲ್ಲ. ಪ್ರೂಫ್‌ ರೀಡರ್‌, ಟೈಪಿಸ್ಟ್‌ಗಳಿಗೆ ವೇತನ ನೀಡಿಲ್ಲ. ಸಂಚಿಕೆ ಬಿಡುಗಡೆ ಮಾಡಿ ಎಂದು ಹಲವು ಲೇಖಕರು ಒತ್ತಾಯಿಸುತ್ತಿದ್ದಾರೆ. ಹೀಗಾಗಿ, ಕಸಾಪ ಕಾರ್ಯಕಾರಿ ಮಂಡಳಿಯ ಭಾವಚಿತ್ರಗಳನ್ನು ಕೈಬಿಟ್ಟು ಕೂಡಲೇ ಮುದ್ರಣ ಮಾಡಿ ಎಂದು ಸಮಿತಿಯ ಅಧ್ಯಕ್ಷರಾದ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರಿಗೆ ಪತ್ರ ಬರೆದಿದ್ದೇನೆ’ ಎಂದು ಸಮಿತಿಯ ಸಂಚಾಲಕ, ಸಾಹಿತಿ ಮ.ರಾಮಕೃಷ್ಣ ತಿಳಿಸಿದ್ದಾರೆ.

ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರ ಭಾವಚಿತ್ರ ಬಳಸಲೇಬೇಕು ಎಂಬ ನಿಯಮವಿಲ್ಲ. ಹೀಗಾಗಿ ಫೋಟೊ ಕೈಬಿಟ್ಟು ಹೆಸರು ಹಾಕಿಕೊಂಡು 8 ದಿನದೊಳಗೆ ಮುದ್ರಣ ಕಾರ್ಯ ಆರಂಭಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ
ಪ್ರೊ.ಬಿ.ಜಯಪ್ರಕಾಶಗೌಡ ಅಧ್ಯಕ್ಷ ಕರ್ನಾಟಕ ಸಂಘ ಮಂಡ್ಯ
ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಜಿಲ್ಲಾ ಸಾಹಿತ್ಯ ಪರಿಷತ್ತಿನ ಯಾರ ಭಾವಚಿತ್ರ ಪ್ರಕಟಿಸಬೇಕು ಎಂಬ ಸ್ಪಷ್ಟತೆ ಇಲ್ಲ. ಇತ್ಯರ್ಥವಾದ ನಂತರ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುತ್ತದೆ
ಮಹೇಶ ಜೋಶಿ ಅಧ್ಯಕ್ಷ ಕಸಾಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.