
ನಾಗಮಂಗಲ: ನಾಡು ನುಡಿಯ ಬಗ್ಗೆ ವರ್ಷವಿಡಿ ಕಾರ್ಯಕ್ರಮ ಆಯೋಜಿಸಿ ಅಪಾರ ಸೇವೆ ನೀಡುತ್ತಾ ಬಂದಿರುವ ಕನ್ನಡ ಸಂಘದ ಬದ್ಧತೆ ಶ್ಲಾಘನೀಯ ಎಂದು ಮೈಸೂರಿನ ಅನುವಾದಕ ಪ್ರಧಾನ್ ಗುರುದತ್ತ ಹೇಳಿದರು.
ನಾಗಮಂಗಲ ಕನ್ನಡ ಸಂಘದ ವತಿಯಿಂದ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದ ಎಸ್.ಎಲ್.ಭೈರಪ್ಪ ನೆನಪಿನ ವೇದಿಕೆಯಲ್ಲಿ ಭಾನುವಾರ ಆರಂಭವಾದ ರಾಜ್ಯಮಟ್ಟದ ನಾಗರಂಗ ನಾಟಕೋತ್ಸವದಲ್ಲಿ ಅವರು ಮಾತನಾಡಿದರು.
‘53 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಂಘ ನಾಡಿನ ಹೆಮ್ಮೆಯ ಸಂಗತಿ. ನಾನು ರಾಜ್ಯ, ರಾಷ್ಟ್ರದ ಅನೇಕ ಕನ್ನಡ ಸಂಘಗಳ ಕಾರ್ಯಕ್ರಮಗಳಲ್ಲಿ ಭಾಗವಹಿದ್ದೇನೆ. ಅನೇಕ ಪ್ರಶಸ್ತಿ, ಪುರಸ್ಕಾರ ಲಭಿಸಿವೆ. ಆದರೆ ನಾಗಮಂಗಲ ಕನ್ನಡ ಸಂಘ ನೀಡಿರುವ ಗೌರವ ಸಂತೋಷ ಕೊಟ್ಟಿದೆ’ ಎಂದರು.
ಹಿರಿಯ ರಂಗಕರ್ಮಿ ಎಂ.ಎನ್.ಲಕ್ಷ್ಮಿದೇವಿ ಮಾತನಾಡಿ, ‘ನಿಮ್ಮನ್ನ ನೋಡೋ ಭಾಗ್ಯವನ್ನು ಇಲ್ಲಿನ ಕನ್ನಡ ಸಂಘ ಕಲ್ಪಿಸಿದೆ. ಎಲ್ಲರಿಗೂ ಶುಭವಾಗಲಿ’ ಎಂದರು.
ಸಂಘದ ಸದಸ್ಯ ರಘುನಾಥ್ ಸಿಂಗ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಸಂಘದ ಅಧ್ಯಕ್ಷ ಪುಟ್ಟಣ್ಣ ಮಾಯಣ್ಣಗೌಡ ಅವರು ದೀಪ ಗೀತೆ ಮಾಲಿಕೆ ಹಾಡುವ ಮೂಲಕ ಚಾಲನೆ ನೀಡಿದರು.
ಪಟ್ಟಣದ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮಕ್ಕಳಿಂದ ಹಚ್ಚೇವು ಕನ್ನಡದ ದೀಪ ಗೀತ ಮಾಲಿಕೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಕಾಲೇಜಿನ ಹೊರಗಡೆ ಪುಸ್ತಕ ಮಳಿಗೆ ಸೇರಿದಂತೆ ಉತ್ತರ ಕರ್ನಾಟಕ ಶೈಲಿಯ ತಿಂಡಿ ತಿನಿಸುಗಳು, ಅಪ್ಪಟ ಖಾದಿಯ ಸಿದ್ಧ ಉಡುಪುಗಳು, ಗೃಹೋಪಯೋಗಿ ಕರಕುಶಲ ಪದಾರ್ಥಗಳ ಹತ್ತಾರು ಮಳಿಗೆಗಳು ರಂಗಾಸಕ್ತರ ಗಮನ ಸೆಳೆದವು.
ಜೋಳದ ರೊಟ್ಟಿ ಸೇರಿದಂತೆ ವಿವಿಧ ಖಾದ್ಯಗಳನ್ನು ಪ್ರೇಕ್ಷಕರು ಸವಿದರು. ನಾಟಕೋತ್ಸವದ ಹಿನ್ನೆಲೆಯಲ್ಲಿ ಇಡೀ ಕಾಲೇಜು ಆವರಣ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.