
ಕಿಕ್ಕೇರಿ: ಬೋರೆ ದೇವಿಯಮ್ಮ ಎಂದು ಜಿಲ್ಲೆಯಲ್ಲಿಯೇ ಪ್ರಸಿದ್ಧಿ ಪಡೆದಿರುವ ಹೋಬಳಿಯ ಊಗಿನಹಳ್ಳಿ ಗ್ರಾಮದಲ್ಲಿರುವ ಕಾರೆಮೆಳೆ ಸಿಂಗಮ್ಮನ ಜಾತ್ರೆ ಸೋಮವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ಕಾರ್ತೀಕ ಮಾಸ ಮುಗಿದ ಮರುದಿನವಾದ ಮಂಗಳವಾರ ಊಗಿನಹಳ್ಳಿ ಗ್ರಾಮದ ಹೊರಭಾಗದಲ್ಲಿನ ಕಾರೆಮೆಳೆ ಸಿಂಗಮ್ಮ ಗುಡಿಯ ಬಳಿ ಜಾತ್ರೆ ನಡೆಯಿತು. ತಾಲ್ಲೂಕು, ರಾಜ್ಯದ ವಿವಿಧ ಮೂಲೆಯಿಂದ ದೇವರ ಒಕ್ಕಲಿನ ಭಕ್ತರು ಸಂಭ್ರಮದಿಂದ ಭಾಗವಹಿಸಿದ್ದರು.
ಜಾನುವಾರುಗಳ ಜಾತ್ರೆ ಎಂದೇ ಪ್ರತೀತಿಯಿರುವ ಜಾತ್ರೆಗೆ ರೈತಾಪಿ ಜನತೆ ತಮ್ಮ ಜಾನುವಾರು, ಕುರಿಗಳನ್ನು ತಂದು ದೇವಿಯ ಗುಡಿ ಸುತ್ತ ಪ್ರದಕ್ಷಿಣೆ ಹಾಕಿಸಿ ರೋಗ ರುಜಿನ ಬಾರದಂತೆ ಸಿಂಗಮ್ಮದೇವಿಯಲ್ಲಿ ಪ್ರಾರ್ಥಿಸಿದರು.
ಯುವಕರು, ನೂತನ ದಂಪತಿ ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಭಾಗವಹಿಸಿದರು. ರೈತಾಪಿ ಜನತೆ ತಮ್ಮ ಜಾನುವಾರುಗಳಿಗೆ ಬಣ್ಣ ಬಣ್ಣದ ಟೇಪು, ಗೆಜ್ಜೆ ಕಟ್ಟಿ, ತಿಲಕವಿಟ್ಟು ಗುಡಿಯ ಮುಂದೆ ಆರತಿ ಎತ್ತಿದರು. ಗುಡಿಯ ಸುತ್ತ ಪ್ರದಕ್ಷಿಣೆ ಹಾಕಿಸಿ ರೋಗ ರುಜಿನ ಬಾರದಂತೆ ಮೊರೆಇಟ್ಟರು.
ಜಾತ್ರೆಗೆ ಇಡೀ ದಿನ ವಿದ್ಯುತ್ ಇಲ್ಲದೆ ಕಗ್ಗತ್ತಲಿನಲ್ಲಿ ದೇವರ ದರ್ಶನ ಪಡೆಯುವಂತಾಗಿ ಭಕ್ತರು ಶಪಿಸುವಂತಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.