ADVERTISEMENT

ಮೇಷ್ಟ್ರು ಎಂದೇ ಖ್ಯಾತರಾಗಿದ್ದ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 21 ಮೇ 2021, 11:58 IST
Last Updated 21 ಮೇ 2021, 11:58 IST
ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ
ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ    

ಮಂಡ್ಯ: ಮೇಷ್ಟ್ರು ಎಂದೇ ಖ್ಯಾತರಾಗಿದ್ದ ಮಾಜಿ ಸ್ಪೀಕರ್‌ ಕೆ.ಆರ್‌.ಪೇಟೆ ಕೃಷ್ಣ (80) ಅವರು ಅನಾರೋಗ್ಯದಿಂದ ಮೈಸೂರಿನ ತಮ್ಮ ನಿವಾಸದಲ್ಲಿ ಶುಕ್ರವಾರ ನಿಧನರಾದರು.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇತ್ತೀಚೆಗಷ್ಟೇ ಮೈಸೂರಿಗೆ ಮರಳಿದ್ದರು. ಅವರಿಗೆ ಪತ್ನಿ, ಪುತ್ರಿ ಇದ್ದಾರೆ.

ಅವರ ಹುಟ್ಟೂರು, ಕೆ.ಆರ್‌.ಪೇಟೆ ತಾಲ್ಲೂಕು, ಸಂತೇಬಾಚಹಳ್ಳಿ ಹೋಬಳಿ ಕೊತ್ತಮಾರನಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

ವಕೀಲರಾಗಿ ಖ್ಯಾತರಾಗಿದ್ದ ಅವರು ಜನತಾ ಪರಿವಾರದಿಂದ ತಾಲ್ಲೂಕು ಬೋರ್ಡ್‌ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ್ದರು.

ಕೆ.ಆರ್‌.ಪೇಟೆ ಕ್ಷೇತ್ರದಿಂದ 1985 (ಜನತಾ ದಳ),1994 (ಜನತಾ ಪಕ್ಷ), 2004 (ಜೆಡಿಎಸ್‌) ರಲ್ಲಿ ಶಾಸಕರಾಗಿದ್ದರು. ಎಸ್‌.ಆರ್‌.ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವರಾಗಿ ಕೆಲಸ ಮಾಡಿದ್ದರು.

2008ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದರು. 2013ರಲ್ಲಿ ಕಾಂಗ್ರೆಸ್ ಸೇರಿ ನಂತರ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು.

1996ರಲ್ಲಿ ಮಂಡ್ಯ ಜಿಲ್ಲೆಯ ಸಂಸದರಾಗಿದ್ದರು. ಬಿಜೆಪಿ– ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕೃಷ್ಣ ಸ್ಪೀಕರ್‌ ಆಗಿದ್ದರು. ವಿಧಾನಸಭಾ ಕಲಾಪವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿ ‘ಮೇಷ್ಟ್ರು’ ಎಂದೇ ಪ್ರಸಿದ್ಧಿ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.