ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ಮಂಡ್ಯ: ‘ರಾಜ್ಯಪಾಲರ ವಿರುದ್ಧ ಗೋ ಬ್ಯಾಕ್ ಗವರ್ನರ್ ಎನ್ನುತ್ತಿರುವ ರಾಜ್ಯ ಕಾಂಗ್ರೆಸ್ ಏನೂ ಸಾಧಿಸುವುದಿಲ್ಲ. ಈ ಸಂಘರ್ಷಗಳಿಂದ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದಾ? ಕೇವಲ ರಾಜಕೀಯ ನಾಟಕ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಿವಳ್ಳಿ ಗ್ರಾಮದಲ್ಲಿ ಶುಕ್ರವಾರ ಮಾರಮ್ಮ ದೇವಿ ದೇವಾಲಯ ಉದ್ಘಾಟನೆ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಈ ಹಿಂದೆ ಕಾಂಗ್ರೆಸ್ ರಾಜ್ಯಪಾಲರುಗಳ ವಿಷಯದಲ್ಲಿ ಹೇಗೆ ನಡೆದುಕೊಂಡಿತ್ತು ಎಂಬುದನ್ನು ನೆನಪು ಮಾಡಿಕೊಂಡರೆ ಇವರ ಬಣ್ಣ ಏನೆಂದು ಗೊತ್ತಾಗುತ್ತದೆ. ರಾಜ್ಯಪಾಲರು ಭಾಷಣ ಓದದಿರುವ ಅಥವಾ ಮೊಟಕುಗೊಳಿಸಿರುವ ಘಟನೆ ಇದೇ ಮೊದಲ ಬಾರಿ ನಡೆದದ್ದು ಅಲ್ಲ. ಜೆ.ಎಚ್. ಪಟೇಲರು ಸಿಎಂ ಆಗಿದ್ದಾಗ ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಅಂದಿನ ಸಂದರ್ಭವನ್ನು ನೆನಪು ಮಾಡಿಕೊಳ್ಳಬೇಕು ಎಂದರು.
‘ಈ ಸರ್ಕಾರದಲ್ಲಿ ಹಲವಾರು ಅಕ್ರಮಗಳು ನಡೆದಿವೆ. ಕಾನೂನು ಬಾಹಿರ ನಿರ್ಧಾರಗಳ ಬಗ್ಗೆ ರಾಜ್ಯಪಾಲರು ಕ್ರಮ ಕೈಗೊಳ್ಳುವ ಅವಕಾಶ ಇದ್ದರೂ ಬೇರೆ ರಾಜ್ಯಗಳ ರಾಜ್ಯಪಾಲರ ರೀತಿ ಸಂಘರ್ಷ ಮಾಡಲಿಲ್ಲ. ಅದನ್ನು ಈ ಸರ್ಕಾರ ಅರ್ಥ ಮಾಡಿಕೊಂಡಿಲ್ಲ. ಕೇಂದ್ರ ಸರ್ಕಾರದ ಜತೆ ರಾಜ್ಯ ಸರ್ಕಾರ ವಿಶ್ವಾಸದಲ್ಲಿ ಇಲ್ಲ. ಇವರ ತಪ್ಪಿನಿಂದ ಕೆಲ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ವಾಪಸ್ ಹೋಗಿವೆ. ಇದಕ್ಕೆ ಹೊಣೆ ಯಾರು? ಎಂದು ಅವರು ಪ್ರಶ್ನಿಸಿದರು.
‘ಕಳೆದ ಎರಡೂ ಮುಕ್ಕಾಲು ವರ್ಷಗಳಲ್ಲಿ ನಡೆಸಿರುವ ಅನ್ಯಾಯ, ಅಕ್ರಮಗಳನ್ನು ಮರೆಮಾಚಲು ‘ವಿಬಿ ಜಿ ರಾಮ್ ಜಿ’ ಯೋಜನೆಯ ಬಗ್ಗೆ ಕಾಂಗ್ರೆಸ್ ಸರ್ಕಾರ ಅಪಪ್ರಚಾರ ಮಾಡುತ್ತಿದೆ. ಪದೇ ಪದೇ ದಲಿತರ ಹೆಸರು ಬಳಸಿ ತಮ್ಮ ಸ್ಥಾನಮಾನ ಗಟ್ಟಿಗೊಳಿಸುವ ಪ್ರಯತ್ನದಲ್ಲಿದ್ದಾರೆ. ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ, ವರ್ಗದ ಜನರಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿಗಳಿಗೆ ಬಳಸಿದ್ದಾರೆ. ಇದು ದಲಿತರ ಉದ್ಧಾರವೇ? ಎಂದು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.