ADVERTISEMENT

ಮಂಡ್ಯ | ಸಾಮಾಜಿಕ– ಶೈಕ್ಷಣಿಕ ಸಮೀಕ್ಷೆ: ಶೇ 86 ಪ್ರಗತಿ

ಪಾಂಡವಪುರ ತಾಲ್ಲೂಕು ಮುಂಚೂಣಿ; ಮಂಡ್ಯ ತಾಲ್ಲೂಕಿನಲ್ಲಿ ಸರ್ವೆ ಮಂದಗತಿ

ಸಿದ್ದು ಆರ್.ಜಿ.ಹಳ್ಳಿ
Published 7 ಅಕ್ಟೋಬರ್ 2025, 4:59 IST
Last Updated 7 ಅಕ್ಟೋಬರ್ 2025, 4:59 IST
ಮದ್ದೂರು ತಾಲ್ಲೂಕಿನ ಕದಲೂರು ಗ್ರಾಮದಲ್ಲಿ ಶಾಸಕ ಕೆ.ಎಂ. ಉದಯ ಅವರ ಮನೆಯಲ್ಲಿ ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆದಾರರು ಮಾಹಿತಿ ಸಂಗ್ರಹಿಸಿದರು 
ಮದ್ದೂರು ತಾಲ್ಲೂಕಿನ ಕದಲೂರು ಗ್ರಾಮದಲ್ಲಿ ಶಾಸಕ ಕೆ.ಎಂ. ಉದಯ ಅವರ ಮನೆಯಲ್ಲಿ ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆದಾರರು ಮಾಹಿತಿ ಸಂಗ್ರಹಿಸಿದರು    

ಮಂಡ್ಯ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುತ್ತಿರುವ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ಗೆ ಒಂದು ದಿನ ಮಾತ್ರ ಬಾಕಿ ಇದ್ದು, ಇದುವರೆಗೆ ಜಿಲ್ಲೆಯಲ್ಲಿ ಶೇ 86.8ರಷ್ಟು ಪ್ರಗತಿಯಾಗಿದೆ. 

ಸೆಪ್ಟೆಂಬರ್‌ 22ರಿಂದ ಅಕ್ಟೋಬರ್‌ 7ರೊಳಗೆ ಸಮೀಕ್ಷೆ ಪೂರ್ಣಗೊಳಿಸಲು ಒಟ್ಟು 16 ದಿನಗಳ ಗಡುವು ನೀಡಲಾಗಿದೆ. ಈಗಾಗಲೇ 15 ದಿನಗಳು ಕಳೆದಿದ್ದು, ಜಿಲ್ಲೆಯಲ್ಲಿ ಪಾಂಡವಪುರ ತಾಲ್ಲೂಕು (ಶೇ 95.5) ಸಮೀಕ್ಷೆ ಪ್ರಗತಿಯಲ್ಲಿ ಮುಂಚೂಣಿಯಲ್ಲಿದೆ. ಮದ್ದೂರು ಮತ್ತು ಕೆ.ಆರ್‌.ಪೇಟೆ ಕ್ರಮವಾಗಿ 2 ಮತ್ತು 3ನೇ ಸ್ಥಾನಗಳಲ್ಲಿವೆ. ಮಂಡ್ಯ ತಾಲ್ಲೂಕಿನಲ್ಲಿ ಸರ್ವೆ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದ್ದು, ಕಡೆಯ ಸ್ಥಾನದಲ್ಲಿದೆ. 

ಈ ಸಮೀಕ್ಷೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಮಂಡ್ಯ ನಗರದ ವಾರ್ಡ್‌ ನಂ.20ರಲ್ಲಿರುವ ಬಸವರಾಜು ಎಚ್.ಸಿ ಅವರ ಮನೆಯಿಂದ ಸೆ.22ರಂದು ಚಾಲನೆ ನೀಡಿದ್ದರು. 

ADVERTISEMENT

ಮಂಡ್ಯ ಜಿಲ್ಲೆಯಲ್ಲಿ 4,96,469 ಕುಟುಂಬಗಳಿದ್ದು, 4,568 ಸಮೀಕ್ಷೆದಾರರನ್ನು ನಿಯೋಜಿಸಲಾಗಿದೆ. ಒಬ್ಬ ಗಣತಿದಾರರಿಗೆ 120 ಕುಟುಂಬಗಳಂತೆ ಬ್ಲಾಕ್ ಹಂಚಿಕೆ ಮಾಡಲಾಗಿದೆ. 20 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ.

65 ಸಾವಿರ ಕುಟುಂಬಗಳ ಸಮೀಕ್ಷೆ ಬಾಕಿ: 4,96,469 ಕುಟುಂಬಗಳ ಪೈಕಿ ಇದುವರೆಗೆ 4,30,936 ಕುಟುಂಬಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಇನ್ನೂ 65,533 ಕುಟುಂಬಗಳ ಸರ್ವೆ ಕಾರ್ಯ ಬಾಕಿ ಇದ್ದು, ಕಡೆಯ ದಿನವಾದ ಅ.7ರಂದು ಒಂದೇ ದಿನ ಇಷ್ಟೂ ಕುಟುಂಬಗಳ ಸಮೀಕ್ಷೆ ಕಾರ್ಯ ಮಾಡುವುದು ದೊಡ್ಡ ಸವಾಲಾಗಿದೆ. 

‘ಗ್ರಾಮೀಣ ಭಾಗದಲ್ಲಿ ಸಮೀಕ್ಷೆ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಮನೆಗಳನ್ನು ಪತ್ತೆ ಹಚ್ಚುವುದು ಸಮೀಕ್ಷೆದಾರರಿಗೆ ತೊಡಕಾಗಿದೆ. ಕೆಲವು ಮನೆಗಳಿಗೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದ ಮೀಟರ್‌ ರೀಡರ್‌ ಸಿಬ್ಬಂದಿ ಸಮೀಕ್ಷೆಯ ಯುಎಚ್‌ಐಡಿ ಮತ್ತು ಸಮೀಕ್ಷೆ ಐಡಿ ಒಳಗೊಂಡ ಸ್ಟಿಕರ್‌ಗಳನ್ನು ಸರಿಯಾಗಿ ಅಂಟಿಸಿಲ್ಲ. ಎರಡು ಮೀಟರ್‌ಗಳಿದ್ದರೆ ಒಂದೇ ಸ್ಟಿಕರ್‌ ಅಂಟಿಸಿದ್ದಾರೆ. ಈ ಕಾರಣದಿಂದ ಸಮೀಕ್ಷೆ ಕಾರ್ಯ ವಿಶೇಷವಾಗಿ ಮಂಡ್ಯ ನಗರದಲ್ಲಿ ಕುಂಠಿತಗೊಂಡಿದೆ’ ಎಂದು ಅಧಿಕಾರಿಗಳು ತಿಳಿಸಿದರು. ‌

ಜಿಲ್ಲೆಯಲ್ಲಿ 65 ಸಾವಿರ ಕುಟುಂಬಗಳ ಸಮೀಕ್ಷೆ ಬಾಕಿ ಗ್ರಾಮೀಣದಲ್ಲಿ ಸಮೀಕ್ಷೆ ಸರಳ, ನಗರದಲ್ಲಿ ಜಟಿಲ  ಸಮೀಕ್ಷೆ ಅವಧಿ ವಿಸ್ತರಣೆಗೆ ಸಾರ್ವಜನಿಕರ ಒತ್ತಾಯ

ಕೆಲವು ಸರ್ಕಾರಿ ವಸತಿ ಗೃಹಗಳು ಮತ್ತು ಮನೆಗಳಲ್ಲಿ ಜನರು ವಾಸಿಸುತ್ತಿಲ್ಲ. ಅಂತಹ ಮನೆಗಳ ಫೋಟೊ ತೆಗೆದು ವೆಬ್‌ಸೈಟಿಗೆ ಅಪ್‌ಲೋಡ್‌ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಸಮೀಕ್ಷೆ ಕಾರ್ಯ ಯಶಸ್ವಿಯಾಗಿ ನಡೆದಿದೆ
– ಕುಮಾರ ಜಿಲ್ಲಾಧಿಕಾರಿ ಮಂಡ್ಯ

ಮರು ಸಮೀಕ್ಷೆಗೆ ಒಕ್ಕಲಿಗರ ಸಂಘ ಒತ್ತಾಯ

‘ಜಾತಿವಾರು ಸಮೀಕ್ಷೆ ನಡೆಸುತ್ತಿರುವ ಸರ್ಕಾರವು ಸಮೀಕ್ಷೆದಾರರಿಗೆ ಸರಿಯಾದ ತರಬೇತಿ ನೀಡಿಲ್ಲ. ಹೀಗಾಗಿ ಮಾಹಿತಿ ಸಂಗ್ರಹಕ್ಕೆ ತೊಡಕಾಗಿದೆ. ಆದ್ದರಿಂದ ಸರ್ಕಾರ ಮರು ಸಮೀಕ್ಷೆ ನಡೆಸಬೇಕು’ ಎಂದು ಒಕ್ಕಲಿಗರ ಸಂಘದ ರಾಜ್ಯ ಘಟಕದ ನಿರ್ದೇಶಕ ನಲ್ಲಿಗೆರೆ ಬಾಲು ಒತ್ತಾಯಿಸಿದ್ದಾರೆ.  ‘ನಿಗದಿತ ಗುರಿ ನೀಡಿರುವುದರಿಂದ ತರಾತುರಿಯಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಸಮೀಕ್ಷೆಯಿಂದ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗುವ ಸಂಭವ ಹೆಚ್ಚಾಗಿದೆ. ಇದರ ಬಗ್ಗೆ ನ್ಯಾಯಾಲಯದ ಮೊರೆ ಹೋಗಿ ಹೋರಾಟ ಮಾಡಿದರೂ ತರಬೇತಿ ಕೊರತೆಯಿಂದ ತಪ್ಪು ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ದೂರಿದ್ದಾರೆ. 

‘ಬಿಜೆಪಿ ಸಾಮಾಜಿಕ ನ್ಯಾಯದ ವಿರೋಧಿ’

‘ರಾಜ್ಯ ಸರ್ಕಾರ ನಡೆಸುತ್ತಿರುವ ಈ ಸಮೀಕ್ಷೆಯನ್ನು ವಿರೋಧಿಸುತ್ತಿರುವ ಬಿಜೆಪಿ ಸೇರಿದಂತೆ ಇತರೆ ರಾಜಕೀಯ ಪಕ್ಷಗಳ ನಾಯಕರು ಅಲ್ಪಸಂಖ್ಯಾತ ಹಿಂದುಳಿದ ಹಾಗೂ ದಲಿತ ಸಮುದಾಯಗಳ ಸಾಮಾಜಿಕ ನ್ಯಾಯದ ವಿರೋಧಿಗಳಾಗಿದ್ದಾರೆ’ ಎಂದು ಜಾಗೃತ ಕರ್ನಾಟಕ ಮಂಡ್ಯ ಜಿಲ್ಲಾ ಘಟಕ ಕಿಡಿಕಾರಿದೆ. ಕೆಲವೇ ಕೆಲವು ಜಾತಿಗಳು ಮುಂದುವರಿದಿರುವುದು ಮತ್ತು ಹಲವು ಜಾತಿಗಳು ಹಿಂದುಳಿದಿರುವುದು ವಾಸ್ತವ. ಈ ಸಮೀಕ್ಷೆ ಆಧಾರದ ಮೇಲೆ ಸರ್ಕಾರಗಳು ನೀತಿ-ನಿರೂಪಣೆ ರೂಪಿಸಬೇಕು. ಜೊತೆಗೆ ಸಾಮಾಜಿಕ ನ್ಯಾಯವನ್ನು ಜಾರಿ ಮಾಡಲು ಪ್ರಯತ್ನಿಸಬೇಕು. ಆದರೆ ಇಂತಹ ಸಮೀಕ್ಷೆಗೆ ಕೆಲವರು ಅಡ್ಡಗಾಲು ಹಾಕುತ್ತಿರುವುದು ಸಾಮಾಜಿಕ ನ್ಯಾಯದ ವಿರೋಧಿ ನಡೆಯಾಗಿದೆ ಎಂದು ಜಾಗೃತ ಕರ್ನಾಟಕ ಸಂಚಾಲಕರಾದ ಎನ್.ನಾಗೇಶ್ ಹಾಗೂ ಪೃಥ್ವಿರಾಜ್ ಖಂಡಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.