ADVERTISEMENT

ತಮಿಳುನಾಡಿಗೆ ಕಾವೇರಿ ನೀರು: ಬೆಂಗಳೂರಿನಿಂದ ಕೆಆರ್‌ಎಸ್‌ಗೆ ಬೈಕ್‌ ರ‍್ಯಾಲಿ

ತಮಿಳುನಾಡಿಗೆ ನಿಲ್ಲದ ಕಾವೇರಿ ನೀರು; ಮಂಡ್ಯ ಜಿಲ್ಲೆಯಲ್ಲಿ ಮುಂದುವರಿದ ಹೋರಾಟ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2023, 6:48 IST
Last Updated 4 ಸೆಪ್ಟೆಂಬರ್ 2023, 6:48 IST
ಕನ್ನಡಪರ ಸಂಘಟನೆಗಳ ಸದಸ್ಯರು ಬೆಂಗಳೂರಿನಿಂದ ಕೆಆರ್‌ಎಸ್‌ ಜಲಾಶಯದವರೆಗೆ ಬೈಕ್‌ ರ‍್ಯಾಲಿಯಲ್ಲಿ ಬಂದು ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿದರು
ಕನ್ನಡಪರ ಸಂಘಟನೆಗಳ ಸದಸ್ಯರು ಬೆಂಗಳೂರಿನಿಂದ ಕೆಆರ್‌ಎಸ್‌ ಜಲಾಶಯದವರೆಗೆ ಬೈಕ್‌ ರ‍್ಯಾಲಿಯಲ್ಲಿ ಬಂದು ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿದರು   

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ನಡೆಯುತ್ತಿರುವ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ನೀಡುತ್ತಿದ್ದು, ಭಾನುವಾರ ಬೆಂಗಳೂರಿನ ಕನ್ನಡಪರ ಸಂಘಟನೆಗಳ ಸದಸ್ಯರು ಕೆಆರ್‌ಎಸ್‌ವರೆಗೂ ಬೈಕ್‌ ರ‍್ಯಾಲಿ ನಡೆಸಿ ಪ್ರತಿಭಟನೆಗೆ ಸಾಥ್‌ ನೀಡಿದರು.

ಕರ್ನಾಟಕ ರಕ್ಷಣಾ ವೇದಿಕೆ, ಕರುನಾಡು ಸೇವಕರ ಪಡೆ, ಕರ್ನಾಟಕ ರಕ್ಷಣಾ ಸೇನೆ,  ಕನ್ನಡಿಗರ ರಕ್ಷಣಾ ವೇದಿಕೆ ಸದಸ್ಯರು ಬೈಕ್‌, ಕಾರುಗಳಲ್ಲಿ ಬಂದರು. ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ‘ಕಾವೇರಿ ಉಳಿಸಿ ಮಂಡ್ಯ ರೈತರನ್ನು ಕಾಪಾಡಿ’ ಎಂದು ಘೋಷಣೆ ಕೂಗಿದರು.

‘ಕಾವೇರಿ ನೀರು ಕುಡಿದು ಬದುಕುತ್ತಿರುವ ಬೆಂಗಳೂರು ಜನರೂ ಕಾವೇರಿ ನದಿ ನೀರು ರಕ್ಷಿಸಿಕೊಳ್ಳಬೇಕು. ಹೀಗಾಗಿ ಬೆಂಗಳೂರಿನ ಜನ, ಸಂಘಟನೆಗಳ ಮುಖಂಡರು, ಚಿತ್ರರಂಗದ ಗಣ್ಯರೂ ಹೋರಾಟದಲ್ಲಿ ಪಾಲ್ಗೊಳ್ಳಬೇಕು’ ಎಂದು ಕರುನಾಡು ಸೇವಕರು ಪಡೆಯ ಲೋಕೇಶ್‌ಗೌಡ ಹೇಳಿದರು.

ADVERTISEMENT

ಪ್ರತಿಮೆ ಅಪ್ಪಿ ಪ್ರತಿಭಟನೆ: ನಗರದ ಕಾವೇರಿ ನೀರಾವರಿ ನಿಗಮದ ಕಚೇರಿ ಆವರಣದಲ್ಲಿರುವ ಕಾವೇರಿ ಮಾತೆಯ ಪ್ರತಿಮೆ ಅಪ್ಪಿ ಬಿಜೆಪಿ ಮುಖಂಡರು ‘ಕಾವೇರಿ ನಮ್ಮಮ್ಮ, ನಮ್ಮನ್ನು ಬಿಟ್ಟು ಹೋಗಬೇಡಮ್ಮ’ ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಿದರು.

ಕನ್ನಡ ಸೇನೆಯ ಮುಖಂಡರು ನಗರದ ಜೆ.ಸಿ.ವೃತ್ತದ ಬಳಿ ತಲೆ ಮೇಲೆ ಕಲ್ಲು ಚಪ್ಪಡಿ ಹೊತ್ತುಕೊಂಡು ಪ್ರತಿಭಟನೆ ನಡೆಸಿದರು. ರೈತ ಹಿತರಕ್ಷಣಾ ಸಮಿತಿ ಸದಸ್ಯರು ಸರ್‌.ಎಂ.ವಿ ಪ್ರತಿಮೆ ಎದುರು ಧರಣಿ ಮುಂದುವರಿಸಿದರು. ಮದ್ದೂರು, ಪಾಂಡವಪುರದಲ್ಲಿಯೂ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.

ಮಕ್ಕಳಿಂದಲೂ ಪ್ರತಿಭಟನೆ: ‌ಶ್ರೀರಂಗಪಟ್ಟಣದಲ್ಲಿ ಭೂಮಿತಾಯಿ ರೈತ ಹೋರಾಟ ಸಮಿತಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾನುವಾರ 50ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.

ಶ್ರೀರಂಗಪಟ್ಟಣದಲ್ಲಿ ಭೂಮಿತಾಯಿ ರೈತ ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟದಲ್ಲಿ ಮಕ್ಕಳು ಪಾಲ್ಗೊಂಡಿದ್ದರು

ಮಕ್ಕಳಿಂದಲೂ ಪ್ರತಿಭಟನೆ

ಶ್ರೀರಂಗಪಟ್ಟಣದಲ್ಲಿ ಭೂಮಿತಾಯಿ ರೈತ ಹೋರಾಟ ಸಮಿತಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾನುವಾರ 50ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. 5ರಿಂದ 15 ವರ್ಷ ವಯಸ್ಸಿನ ಮಕ್ಕಳು ಫಲಕಗಳನ್ನು ಹಿಡಿದು ‘ಕಾವೇರಿ ನೀರು ನಮ್ಮದು ’ ಎಂದು ಘೋಷಣೆ ಕೂಗಿದರು. ಸೋಪಾನಕಟ್ಟೆಯಿಂದ ಮಿನಿ ವಿಧಾನಸೌಧದವರೆಗೆ ಮೆರವಣಿಗೆ ನಡೆಸಿದರು. ‘ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಸಚಿವರು ಶಾಸಕರು ಅಧಿಕಾರಿಗಳು ಕೂಡ ಕಾವೇರಿ ನೀರು ಕುಡಿಯುತ್ತಾರೆ. ಕಾವೇರಿ ನೀರಿನಲ್ಲಿ ಬೆಳೆದ ಅನ್ನ ಉಣ್ಣುತ್ತಿದ್ದಾರೆ. ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ಸಾಕಷ್ಟು ನೀರಿಲ್ಲವೆಂದು ಗೊತ್ತಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಸರಿಯಲ್ಲ’ ಎಂದು 9ನೇ ತರಗತಿ ವಿದ್ಯಾರ್ಥಿ ದರಸಗುಪ್ಪೆಯ ಆಕಾಶ್‌ ಹೇಳಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.