ಎ.ಐ ಚಿತ್ರ
ಮಂಡ್ಯ: ರೈತಸಂಘದ ಪ್ರಬಲ ವಿರೋಧದ ನಡುವೆಯೂ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಅಣೆಕಟ್ಟೆ ಬಳಿ ಸೆ.26ರಿಂದ 30ರವರೆಗೆ ‘ಕಾವೇರಿ ಆರತಿ’ ಕಾರ್ಯಕ್ರಮ ಆಯೋಜಿಸಲಾಗಿದೆ.
ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು ಶ್ರೀರಂಗಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ.
‘ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 5 ದಿನ ಕಾವೇರಿ ಆರತಿ ಸಮಾರಂಭವನ್ನು ವಿಜೃಂಭಣೆಯಿಂದ ಸಾಂಕೇತಿಕವಾಗಿ ಆಚರಿಸಲಾಗುವುದು. 26ರಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ’ ಎಂದು ತಿಳಿಸಿದ್ದಾರೆ.
ಕಾನೂನು ಉಲ್ಲಂಘನೆ:
‘ಹೈಕೋರ್ಟ್ ತಡೆಯಾಜ್ಞೆಯಿದ್ದರೂ ಆರತಿ ಪ್ರಕ್ರಿಯೆ ನಡೆಸಲು ಸರ್ಕಾರ ಮುಂದಾಗಿದೆ’ ಎಂದು ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಅಸಮಾಧಾನ ವ್ಯಕ್ತಪಡಿಸಿದರು.
‘ದರ್ಪ, ಅಧಿಕಾರ, ಹಣದ ಮದದಿಂದ ಕಾನೂನನ್ನು ಉಲ್ಲಂಘಿಸಲಾಗುತ್ತಿದೆ. ಕೆ.ಆರ್.ಎಸ್ ಅಣೆಕಟ್ಟೆಯನ್ನು ನಾಶ ಮಾಡಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುನ್ನೀರಿನಲ್ಲಿ ಕಾವೇರಿ ಆರತಿ ನಡೆಸಲು ಮುಂದಾಗಿದ್ದಾರೆ. ಮಂಡ್ಯ ಸಂಸದರೂ ಆದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಿನ್ನೀರಿನಲ್ಲಿ ‘ಸೀ ಪ್ಲೇನ್’ ಯೋಜನೆಯನ್ನು ತರಲು ಹುನ್ನಾರ ನಡೆಸುತ್ತಿದ್ದಾರೆ. ಈ ಎರಡೂ ಯೋಜನೆಗಳು ಡ್ಯಾಂಗೆ ಅಪಾಯ ತಂದೊಡ್ಡುತ್ತವೆ’ ಎಂದು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.