ADVERTISEMENT

ಕೆಆರ್‌ಎಸ್‌ | 5ದಿನ ಕಾವೇರಿ ಆರತಿ: ಸೆ.26ಕ್ಕೆ ಡಿಸಿಎಂ ಶಿವಕುಮಾರ್‌ರಿಂದ ಚಾಲನೆ

ಡಿಸಿಎಂ ಶಿವಕುಮಾರ್‌ರಿಂದ ಚಾಲನೆ ಸೆ.26ಕ್ಕೆ: ವಿವಿಧ ಮಠಾಧೀಶರು ಭಾಗಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 4:50 IST
Last Updated 24 ಸೆಪ್ಟೆಂಬರ್ 2025, 4:50 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಮಂಡ್ಯ: ಕನ್ನಡ ನಾಡಿನ ಜೀವನದಿ ‘ಕಾವೇರಿ ಆರತಿ’ ಎಂಬ ಐದು ದಿನಗಳ ಭವ್ಯ ಕಾರ್ಯಕ್ರಮವು ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಅಣೆಕಟ್ಟೆ ಬಳಿ ಸೆ.26ರಿಂದ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಮಾಹಿತಿ ನೀಡಿದ್ದಾರೆ. 

ಸೆ.26ರಂದು 5 ಗಂಟೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ‘ಕಾವೇರಿ ಆರತಿ’ ಕಾರ್ಯಕ್ರಮಕ್ಕೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಲಿದ್ದಾರೆ.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಹಾಗೂ ಜಿಲ್ಲೆಯ ಶಾಸಕರು ಪಾಲ್ಗೊಳ್ಳಲಿದ್ದಾರೆ. 

ಗಂಗೆಯಷ್ಟೇ ಪಾವಿತ್ರ್ಯ ಹೊಂದಿರುವ ಕಾವೇರಿ ನದಿಗೆ ಕಾವೇರಿ ಆರತಿ ಮಾಡಿ ಭಕ್ತಿ ಭಾವದಿಂದ ನಮಿಸಿ ಪೂಜಿಸಬೇಕೆಂಬುದು ಡಿ.ಕೆ.ಶಿವಕುಮಾರ್ ಅವರ ಕನಸಾಗಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2024ರಲ್ಲಿ ಕೆಆರ್‌ಎಸ್‌ನಲ್ಲಿ ಕಾವೇರಿಗೆ ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಡಿಸಿಎಂ ಈ ವಿಷಯವನ್ನು ಘೋಷಣೆ ಮಾಡಿದ್ದರು‌.

ADVERTISEMENT

ಶಾಸಕರ ನಿಯೋಗ ವಾರಣಾಸಿ ಮತ್ತು ಹರಿದ್ವಾರಕ್ಕೆ ಭೇಟಿ ನೀಡಿ ಗಂಗಾರತಿಯನ್ನು ವೀಕ್ಷಿಸಿ ಸರ್ಕಾರಕ್ಕೆ ವರದಿ ನೀಡಿತ್ತು. ಆ ಪ್ರಕಾರ ಸರ್ಕಾರ ಕಾವೇರಿ ಆರತಿ ಮಾಡಲು ತೀರ್ಮಾನಿಸಿ, ಸುಮಾರು 10 ಸಾವಿರ ಜನರು ಭವ್ಯ ಕಾರ್ಯಕ್ರಮ ವೀಕ್ಷಣೆ ಮಾಡಬಹುದಾದ ಬೃಹತ್ ಸ್ಟೇಡಿಯಂ ನಿರ್ಮಿಸಲು ಸಚಿವ ಸಂಪುಟ ಅನುಮೋದನೆ ನೀಡಿತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕಾವೇರಿ ಆರತಿಯ ವಿಧಿ ವಿಧಾನಗಳು

13 ಜನರಿಂದ ಆರತಿ. ಅವರಿಗೆ ತಲಾ ಇಬ್ಬರು ಸಹಾಯಕರು ಸೇರಿ ಒಟ್ಟು 40 ಜನರ ತಂಡ ಪೂಜೆಯಲ್ಲಿ ಭಾಗಿ

* ಮೊದಲು ‘ವಾತಾಪಿ ಗಣಪತಿಂ ಭಜೆ’ ಮಂಗಳವಾದ್ಯದಿಂದ ಪೂಜೆ ಪ್ರಾರಂಭ

* ಕಾವೇರಿ ಪ್ರಾರ್ಥನೆ ಗಣಪತಿ ಪ್ರಾರ್ಥನೆ ಗುರು ಪ್ರಾರ್ಥನೆ ಸಂಕಲ್ಪ

* ಕಾವೇರಿ ಸ್ತೋತ್ರದ ಮೂಲಕ ತೀರ್ಥಕ್ಕೆ ಪೂಜೆ ಬಾಗಿನ ಅರ್ಪಣೆ

* ಬ್ರಹ್ಮ ವಿಷ್ಣು ಮಹೇಶ್ವರರ ಪ್ರಾರ್ಥನೆ ಚಾಮರ ಸೇವೆ* ಮೂರು ದಿಕ್ಕಿಗೂ ಶಂಖನಾದ ದೂಪದ ಆರತಿ ಹಾಗೂ ಮಂತ್ರ ಪುಷ್ಪ ಪಠಣ

* ಕೊನೆಯಲ್ಲಿ ಕುಂಭಾರತಿ ನಾಗಾರತಿ ಕಾವೇರಿ ಆರತಿಯೊಂದಿಗೆ ಪೂಜಾ ಕೈಂಕರ್ಯ ಸಂಪನ್ನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.