ADVERTISEMENT

ಮಂಡ್ಯ | ‘ಕಾವೇರಿ ಆರತಿ; ಕಾನೂನಿಗೆ ಅಪಮಾನ’

ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 4:50 IST
Last Updated 24 ಸೆಪ್ಟೆಂಬರ್ 2025, 4:50 IST
ಸುನಂದಾ ಜಯರಾಂ 
ಸುನಂದಾ ಜಯರಾಂ    

ಮಂಡ್ಯ: ‘ಕೆ.ಆರ್‌.ಎಸ್‌. ಅಣೆಕಟ್ಟೆ ಬಳಿ ‘ಕಾವೇರಿ ಆರತಿ’ ಪ್ರಕ್ರಿಯೆ ಕೈಗೊಂಡಿರುವುದು ಕಾನೂನಿಗೆ ಮಾಡುತ್ತಿರುವ ಅಪಮಾನವಾಗಿದೆ. ಅಣೆಕಟ್ಟು ಸುರಕ್ಷತೆ ಕಾಯ್ದೆಗೆ ಭಂಗ ಮಾಡಲಾಗುತ್ತಿದೆ’ ಎಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಂದಾ ಜಯರಾಂ ಆರೋಪಿಸಿದರು. 

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಅಣೆಕಟ್ಟೆ ಬಳಿ ಕಾವೇರಿ ಆರತಿ ಮಾಡಬಾರದು ಎಂದು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ. ಮಧ್ಯಂತರ ತಡೆಯಾಜ್ಞೆ ಆದೇಶವಿದ್ದರೂ, ಕಾನೂನು ಉಲ್ಲಂಘಿಸಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಇಲಾಖೆ ಅಧಿಕಾರಿಗಳಿಗೆ ಕಾನೂನು ಅರಿವಿದ್ದರೂ ಪ್ರಕ್ರಿಯೆ ಕೈಗೊಂಡಿದ್ದಾರೆ’ ಎಂದು ಕಿಡಿಕಾರಿದರು. 

ಅಧಿಕಾರ, ದರ್ಪ, ಹಣದ ಮದದಿಂದ ಮಾಡಲಾಗುತ್ತಿರುವ ಈ ದ್ರೋಹದ ಕಾರ್ಯ ಖಂಡನೀಯ. ಮಂಡ್ಯ ಜಿಲ್ಲೆಯ ಜೀವನಾಡಿ ಕೆ.ಆರ್‌.ಎಸ್‌. ಅಣೆಕಟ್ಟೆಯನ್ನು ನಾಶ ಮಾಡಲು ಕಾವೇರಿ ಆರತಿ ಮತ್ತು ಅಮ್ಯೂಸ್‌ಮೆಂಟ್‌ ಪಾರ್ಕ್‌ ಯೋಜನೆ ಕೈಗೊಳ್ಳಲಾಗಿದೆ ಎಂದು ಆರೋಪಿಸಿದರು. 

ADVERTISEMENT

ಡ್ಯಾಂ ಸುರಕ್ಷತೆಗೆ ಧಕ್ಕೆ:

ಮುನ್ನೀರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಎರಡು ಯೋಜನೆಗಳನ್ನು ಕೈಗೊಂಡಿದ್ದರೆ, ಹಿನ್ನೀರಿನಲ್ಲಿ ಮಂಡ್ಯ ಸಂಸದರೂ ಆದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ‘ಸೀ ಪ್ಲೇನ್‌’ ಯೋಜನೆ ಮಾಡಲು ಮುಂದಾಗಿದ್ದಾರೆ. ಇವೆಲ್ಲವೂ ಡ್ಯಾಂ ಸುರಕ್ಷತೆಗೆ ಧಕ್ಕೆ ತರುವ ಯೋಜನೆಗಳು. ಇವರಿಬ್ಬರೇ 2016ರಲ್ಲಿ ಡಿಸ್ನಿಲ್ಯಾಂಡ್‌ ಸ್ಥಾಪಿಸಲು ಮುಂದಾಗಿದ್ದರು. ಆಗಲೂ ರೈತಸಂಘ ಪ್ರಬಲ ವಿರೋಧ ವ್ಯಕ್ತಪಡಿಸಿದ್ದಕ್ಕೆ ರದ್ದಾಯಿತು ಎಂದು ಹೇಳಿದರು. 

ಡಿಕೆಶಿ ಮತ್ತು ಎಚ್‌ಡಿಕೆ ಇಬ್ಬರೂ ಖಾಸಗಿ ಲಾಬಿಗೋಸ್ಕರ ಕೆಆರ್‌ಎಸ್‌ ಅಣೆಕಟ್ಟು ಪ್ರದೇಶವನ್ನು ಖಾಸಗೀಕರಣ ಮಾಡಲು ಮುಂದಾಗಿದ್ದಾರೆ. ಮಂಡ್ಯದ ಜನರನ್ನು ಕುರಿಗಳು, ಹಿಂಬಾಲಕರು ಎಂದು ತಿಳಿದುಕೊಂಡಿರುವಂತಿದೆ. ಈ ಇಬ್ಬರನ್ನು ಜಿಲ್ಲೆಯಿಂದ ಹೊರ ಇಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸಮಿತಿಯ ಅಧ್ಯಕ್ಷ ಜಿ.ಬಿ. ಶಿವಕುಮಾರ್‌, ಎಂ.ವಿ.ಕೃಷ್ಣ ಮತ್ತು ಪದಾಧಿಕಾರಿಗಳು ಇದ್ದರು. 

‘ಮೈಷುಗರ್‌: ಆಡಳಿತ ಮಂಡಳಿ ವೈಫಲ್ಯ’ ಮಂಡ್ಯ ಸಕ್ಕರೆ ಕಾರ್ಖಾನೆ ಸರ್ಕಾರದ ಸ್ವಾಮ್ಯದಲ್ಲಿ ಉಳಿಯಲು ಸಂಘಟನೆಗಳು ಮತ್ತು ಜನ ಕಳೆದ 4 ದಶಕಗಳಿಂದ ನಿರಂತರ ಹೋರಾಟ ಮಾಡಿದ್ದಾರೆ. ಆದರೆ ಆಡಳಿತ ಮಂಡಳಿ ವೈಫಲ್ಯದಿಂದ ಕಾರ್ಖಾನೆ ಸರಿಯಾಗಿ ನಡೆಯುತ್ತಿಲ್ಲ ಎಂದು ಸುನಂದಾ ಜಯರಾಂ ಆರೋಪಿಸಿದರು.  ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಮೈಷುಗರ್‌ ಸಕ್ಕರೆ ಕಾರ್ಖಾನೆಯನ್ನು ಲಾಭದಾಯಕವನ್ನಾಗಿ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರು ಕ್ರಮವಹಿಸಬೇಕು. ₹60 ಕೋಟಿ ವೆಚ್ಚದ ಬಾಯ್ಲರ್‌ ಹೌಸ್‌ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು’ ಎಂದು ಹೇಳಿದ್ದರು. ಇದಕ್ಕಾಗಿ ಸಿಎಂ ಅವರನ್ನು ರೈತಸಂಘ ಅಭಿನಂದಿಸುತ್ತದೆ ಎಂದರು.  ರೈತರ ನಿಯೋಗ ಶೀಘ್ರದಲ್ಲೇ ಸಿಎಂ ಅವರನ್ನು ಭೇಟಿ ಮಾಡಿ ಮೈಷುಗರ್‌ ಕುರಿತು ಚರ್ಚಿಸಲಿದೆ. ಮಂಡ್ಯದಲ್ಲೇ ಸಭೆ ನಡೆಸಲು ಆಹ್ವಾನ ನೀಡುತ್ತೇವೆ ಎಂದರು.  ರೈತ ಮುಖಂಡ ಕೆ.ಬೋರಯ್ಯ ಮಾತನಾಡಿ ‘ಮೊಲಾಸಸ್‌ ಸೋರಿಕೆಯಾಗಿದ್ದು ಮೈಷುಗರ್‌ ಕಾರ್ಖಾನೆಗೆ ನಷ್ಟವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.